ಪತ್ನಿ ಹತ್ಯೆಗೈದಿದ್ದ ಪತಿಗೆ ಜೀವಾವಧಿ ಶಿಕ್ಷೆ: 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ತೀರ್ಪು

court
Published on

ಮಂಡ್ಯ: ವರದಕ್ಷಿಣೆ ತರದ ಪತ್ನಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಕೆತ ಪತಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ತಾಲೂಕಿನ ಆಲಕೆರೆ ಗ್ರಾಮದ ಪ್ರತೀಶ ಎಂಬಾತನೇ ಶಿಕ್ಷೆಗೊಳಗಾದವ. ಈತ ತನ್ನ ಪತ್ನಿ ರಂಜಿನಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಆರೋಪಿ. ಪ್ರತೀಶ ಅದೇ ಗ್ರಾಮದ ರಂಜಿತಾಳನ್ನು 2014ರ ಏ.30ರಂದು ಶಾಸೋಕ್ತವಾಗಿ ಮದುವೆ ಮಾಡಿಕೊಂಡಿದ್ದನು. ಪ್ರಾರಂಭದಲ್ಲಿ ದಂಪತಿ ಅನ್ಯೂನ್ಯವಾಗಿದ್ದರು. ನಂತರದ ದಿನಗಳಲ್ಲಿ ತಂದೆ ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡಲಾರಂಭಿಸಿದ್ದ. ಈ ಹಿನ್ನೆಲೆಯಲ್ಲಿ ಸಾಲ ಮಾಡಿ ಹಣ ಕೊಡಲಾಗಿತ್ತು. ಇದರ ಜತೆಗೆ ಸೀಶಕ್ತಿ ಸಂಘದಲ್ಲಿ ಪ್ರತ್ಯೇಕವಾಗಿ 50 ಸಾವಿರ ಸಾಲ ಪಡೆದು ಗಂಡನಿಗೆ ಕೊಟ್ಟಿದ್ದಳು. ಆದರೆ ಒಂದೇ ಒಂದು ಕಂತು ಕಟ್ಟಿದ ನಂತರ ಹಣ ಕಟ್ಟುವುದನ್ನು ಬಿಟ್ಟಿದ್ದ. ಈ ಮಧ್ಯೆ ರಂಜಿತಾಳಿಗೆ ಒಂದು ಗಂಡು ಮಗು ಜನನವಾಗಿತ್ತು. ಆದರೆ ತವರು ಮನೆಯವರು ಬಾಣಂತನಕ್ಕೆ ಕರೆದೊಯ್ಯಲಿಲ್ಲ ಎಂಬ ಕಾರಣಕ್ಕೆ ತಂದೆಯಿಂದ ಅರ್ಧ ಆಸ್ತಿ ಬರೆಸಿಕೊಡುವಂತೆ ಪೀಡಿಸುತ್ತಿದ್ದ.

ನಿತ್ಯ ವರದಕ್ಷಿಣೆಗಾಗಿ ರಂಜಿತಾಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ. ಮತ್ತೊಂದು ಮಗುವಿಗೆ ಜನ್ಮ ನೀಡಿದಾಗ ತಂದೆ ಮನೆಯಲ್ಲಿ ಬಾಣಂತಕ್ಕೆ ಹೋಗಿದ್ದಳು. ಮೂರು ತಿಂಗಳ ಬಳಿಕ ಕರೆತಂದ ಪ್ರತೀಶ ಆಕೆಯನ್ನು ಹಳೇ ಮನೆಯಲ್ಲಿಟ್ಟು, ಮತ್ತೆ 50 ಸಾವಿರ ರೂ ನೀಡುವಂತೆ ಬೇಡಿಕೆ ಇಟ್ಟು ಕಿರುಕುಳ ಆರಂಭಿಸಿದ್ದ. ತಾನು ತಂದೆ ಮನೆಯಿಂದ ಯಾವುದೇ ಕಾರಣಕ್ಕೂ ಹಣ ತಂದು ಕೊಡುವುದಿಲ್ಲ ಎಂದು ಹೇಳಿದಾಗ ಮತ್ತಷ್ಟು ಉದ್ರಿಕ್ತನಾಗಿ ಆಕೆಯ ಮೇಲೆ ದೈಹಿಕ ಮತ್ತು ಮಾನಸಿಕ ಕಿರುಕುಳ ಆರಂಭಿಸಿದ್ದ. 2018ರ ಜ.4ರಂದು ಮುಂಜಾನೆ ಮತ್ತೆ ಜಗಳವಾಗಿದ್ದು, ವಿಕೋಪಕ್ಕೆ ತಿರುಗಿ ಪತ್ನಿಯ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಲಕಾರಿಯಾಗದೆ ಜ.10ರಂದು ಮೃತಪಟ್ಟಿದ್ದಳು.

ಈ ಸಂಬಂಧ ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಅಂದಿನ ಡಿವೈಎಸ್ಪಿ ಎಸ್.ಇ. ಗಂಗಾಧರಸ್ವಾಮಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಯ್ಯುದುನಿಶಾ ಅವರು ಅಪರಾಧಿಗೆ ಜೀವಾವಧಿ ಸಜೆ ಮತ್ತು ದಂಡ ವಿಧಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕಿ ಎನ್.ಬಿ.ವಿಜಯಲಕ್ಷ್ಮೀ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net