

ಹಾಸನ: ವರದಕ್ಷಿಣಿ ಹಣಕ್ಕಾಗಿ ಪತ್ನಿಯನ್ನು ಕೊಂದ ಪತಿಗೆ ಹಾಸನದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 75 ಸಾವಿರ ರೂ. ದಂಡ ವಿಧಿಸಿ ಜ.6ರ ಶನಿವಾರ ತೀರ್ಪು ನೀಡಿದೆ.
ಹಾಸನ ತಾಲೂಕು, ಶಾಂತಿಗ್ರಾಮ ಹೋಬಳಿ, ಮೊಸಳೆ ಹೊಸಹಳ್ಳಿ ಗ್ರಾಮದ ವಾಸಿ ಸಿ.ಟಿ. ಪುಟ್ಟಸ್ವಾಮಿಗೆ ಶಿಕ್ಷೆಗೆ ಗುರಿಯಾದ ಅಪರಾಧಿ. 2005ರಲ್ಲಿ ಪುಟ್ಟಸ್ವಾಮಿ ಪುಟ್ಟಭಾಗ್ಯಮ್ಮಾ ಎಂಬುವವರನ್ನು ವಿವಾಹವಾಗಿದ್ದ. ಮದುವೆ ಸಮಯದಲ್ಲಿ ಚಿನ್ನಾಭರಣ ಹಾಗೂ ನಗದನ್ನು ವಧುವಿನ ಮನೆಯಿಂದ ನೀಡಲಾಗಿತ್ತು. ಆದಾಗ್ಯೂ ಹೆಚ್ಚುವರಿ ವರದಕ್ಷಿಣಿ ತರುವಂತೆ ಪ್ರತಿನಿತ್ಯ ಹೆಂಡತಿಯನ್ನು ಒತ್ತಾಯಿಸಿ ಹಲ್ಲೆ ಮಾಡುತ್ತಿದ್ದ. 2009 ಸೆಪ್ಟೆಂಬರ್ 9ರಂದು ರಾತ್ರಿ ಇದೇ ವಿಷಯವಾಗಿ ಹೆಂಡತಿಯನ್ನು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ.
ಈ ಸಂಬಂಧ ಮೃತಳ ಸಹೋದರಿ ಪುಟ್ಟಸ್ವಾಮಿ ಸೇರಿದಂತೆ ಅವರ ಕುಟುಂಬ ಸದಸ್ಯರ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಪರಾಧಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹಾಸನದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಸಿ. ಸದಾನಂದಸ್ವಾಮಿ ಅವರು ಪ್ರಕರಣದ ಎಲ್ಲಾ ಸಾಕ್ಷೃದಾರರು ಪೂರಕವಾಗಿ ಸಾಕ್ಷೃ ನುಡಿದಿದ್ದು ಸದರಿ ಎಲ್ಲಾ ಸಾಕ್ಷಿದಾರರ ಹೇಳಿಕೆ ಆಧಾರದ ಮೇರೆಗೆ ಪುಟ್ಟಸ್ವಾಮಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಕೆ.ಸುರೇಶ್ ಅವರು ವಾದ ಮಂಡಿಸಿದ್ದರು.