ಪತ್ನಿಯ ಕೊಲೆ ಮಾಡಿ ಆತ್ಮಹತ್ಯೆಯೆಂದು ಬಿಂಬಿಸಿದ ಪತಿಗೆ ಜೀವಾವಧಿ ಶಿಕ್ಷೆ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಮಂಗಳೂರು: ಪತ್ನಿಯನ್ನು ಕುತ್ತಿಗೆ ಹಿಸುಕಿ ಕೊಲೆಗೈದು ಬಳಿಕ ಲುಂಗಿಯ ತುಂಡು ಕುತ್ತಿಗೆ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಾಕ್ಷೃ ನಾಶ ಮಾಡಿದ ಪತಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಸಿಆರ್‌ಸಿ ಕ್ವಾಟ್ರಸ್ ನಿವಾಸಿ ರಾಜ (64) ಶಿಕ್ಷೆಗೊಳಗಾದ ಅಪರಾಧಿ.

ಪ್ರಕರಣದ ಹಿನ್ನೆಲೆ: ರಾಜ ಪ್ರತಿದಿನ ಅಮಲು ಪದಾರ್ಥ ಸೇವಿಸಿ ತನ್ನ ಪತ್ನಿ ಕಮಲಾ ಜತೆ ಜಗಳವಾಡುತ್ತಿದ್ದ. 2022 ಸೆ.4ರಂದು ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಅಲೆಕ್ಕಿ ಧರ್ಣಪ್ಪ ಗೌಡ ಅವರ ಮನೆಗೆ ಕೆಲಸ ಕೇಳಿಕೊಂಡು ಹೋಗಿದ್ದರು. ಅಲ್ಲಿ ರಬ್ಬರ್ ಟ್ಯಾಪಿಂಗ್ ಮಾಡಲು ಕೆಲಸ ನೀಡಿದ್ದರು. ರಬ್ಬರ್ ತೋಟದಲ್ಲಿನ ಶೆಡ್‌ನಲ್ಲಿ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದರು. ಸೆ.6ರಂದು ಸಂಜೆ 5.30ರ ಬಳಿಕ ರಾಜ ಮದ್ಯ ಸೇವಿಸಿ ಬಂದು ಪತ್ನಿ ಜತೆ ಜಗಳ ಮಾಡಿದ್ದಾನೆ. ರಾತ್ರಿ 8 ಗಂಟೆ ವೇಳೆಗೆ ಆಕೆಯ ಕುತ್ತಿಗೆ ಒತ್ತಿ ಹಿಡಿದಿದ್ದಾನೆ. ಈ ಸಂದರ್ಭ ಆಕೆ ನೆಲಕ್ಕೆ ಬಿದ್ದಿದ್ದು, ಆಗ ಕಮಲಾ ಅವರ ತಲೆಯನ್ನು ಜೋರಾಗಿ ನೆಲಕ್ಕೆ ಬಡಿದಿದ್ದಾನೆ. ಬಳಿಕ ತನ್ನ ಲುಂಗಿಯನ್ನು ಹರಿದು ಹಗ್ಗದ ರೀತಿ ಮಾಡಿ ಆಕೆಯ ಕುತ್ತಿಗೆ ಬಿಗಿದ ಪರಿಣಾಮ ಕಮಲಾ ಮೃತಪಟ್ಟಿದ್ದರು. ಬಳಿಕ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕ ಮಾಡಿ ಸಾಕ್ಷೃ ನಾಶ ಮಾಡಿದ್ದ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿತ್ತು.

ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ್ದು, ಈ ಸಂದರ್ಭ ಕಮಲಾ ಆತ್ಮಹತ್ಯೆ ಮಾಡಿಕೊಂಡಿಲ್ಲ, ಇದೊಂದು ಕೊಲೆ ಎಂದು ಅಲ್ಲಿನ ಶವ ಪರೀಕ್ಷೆ ನಡೆಸಿದ್ದ ಡಾ.ವರ್ಷಾ ಶೆಟ್ಟಿ ವರದಿ ನೀಡಿದ್ದರು. ಬಳಿಕ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಾಥಮಿಕ ತನಿಖೆಯನ್ನು ಅಂದಿನ ಪಿಎಸ್‌ಯ ನಂದ ಕುಮಾರ್ ಎಂ.ಎಂ. ನಡೆಸಿದ್ದು, ನಂತರ ಪೂರ್ಣ ಪ್ರಮಾಣದ ತನಿಖೆಯನ್ನು ಅಂದಿನ ಇನ್‌ಸ್ಪೆಕ್ಟರ್ ಶಿವಕುಮಾರ್ ಬಿ. ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣವು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಅಭಿಯೋಜನೆ ಪರ ಒಟ್ಟು 17 ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿದೆ. ಈ ಪ್ರಕರಣದ ಸಾಕ್ಷೃ ದಾಖಲೆಗಳು ಹಾಗೂ ಪೂರಕ ಸಾಕ್ಷೃವನ್ನು ಮತ್ತು ವಾದ-ಪ್ರತಿವಾದ ಆಲಿಸಿ ಆರೋಪಿ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶರಾದ ಸಂಧ್ಯಾ ಎಸ್. ಅವರು ಜೀವಾವಧಿ ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿದ್ದಾರೆ. ನ್ಯಾಯಾಲಯವು ಮೃತರ ಮೂವರು ಮಕ್ಕಳಾದ ಸವಿತಾ, ರಶ್ಮೀ ಹಾಗೂ ಮನು ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ.

ಮಹತ್ವವಾದ ವೈದ್ಯಕೀಯ ಸಾಕ್ಷಿ

ಈ ಪ್ರಕರಣ ಆರಂಭದಲ್ಲಿ ಅಸಹಜ ಸಾವು ಎಂದು ದಾಖಲಾಗಿದ್ದು, ಕಮಲ ಅವರ ಮೃತದೇಹದ ವೈದ್ಯಕೀಯ ಪರೀಕ್ಷೆ ನಡೆಸಿದ ದೇರಳಕಟ್ಟೆ ಜ.ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವರ್ಷಾ ಎ.ಶೆಟ್ಟಿ ಅವರು ಕಮಲಾ ಆತ್ಮಹತ್ಯೆಯಿಂದ ಮೃತಪಟ್ಟಿಲ್ಲ. ಬದಲಾಗಿ ಅವರನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಎಂದು ವೈದ್ಯಕೀಯ ಶವ ಪರೀಕ್ಷೆಯ ವರದಿ ನೀಡಿದ ಮೇರೆಗೆ ಸೆ.10ರಂದು ಕೊಲೆ ಪ್ರಕರಣ ದಾಖಲಾಗಿತ್ತು. ಅದೇ ರೀತಿ ವೈದ್ಯಾಧಿಕಾರಿ ಅವರು ನ್ಯಾಯಾಲಯದಲ್ಲಿ ಅವರು ನೀಡಿದ ಶವ ಪರೀಕ್ಷಾ ವರದಿಗೆ ಪೂರಕವಾಗಿ ಸಾಕ್ಷಿ ನುಡಿದಿದ್ದರು. ಈ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿ ಇಲ್ಲದೇ ಇರುವುದರಿಂದ ಆರೋಪಿಯ ವಿರುದ್ಧದ ಆರೋಪವನ್ನು ವೈದ್ಯಕೀಯ ಸಾಕ್ಷೃದ ಸಹಾಯದಿಂದ ಸಾಬೀತು ಮಾಡಲಾಗಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮೋಹನ್ ಕುಮಾರ್ ಬಿ. ಅವರು ವಾದ ಮಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net