ಮೈಸೂರು: ವಿಚ್ಛೇದಿತ ಪತ್ನಿಯನ್ನು ಡ್ರಾೃಗನ್‌ನಿಂದ ಇರಿದು ಕೊಲೆ ಮಾಡಿದ್ದ ಅಪರಾಧಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ, ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಕಾರ್ತಿಕ್ ಶಿಕ್ಷೆಗೆ ಗುರಿಯಾದ ಅಪರಾಧಿ.
ವಿದ್ಯಾರಣ್ಯಪುರಂನ ಸುನೀತಾಳಕ್ಕೆ ಪ್ರೀತಿಸಿ ಮದುವೆಯಾಗಿದ್ದ ಕಾರ್ತಿಕ್‌ಗೆ 7 ವರ್ಷದ ಭುವನ್ ಮಗನಿದ್ದ. ಪತ್ನಿಯ ಶೀಲದ ಮೇಲೆ ಅನುಮಾನ ಪಟ್ಟು ಆಕೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಇದರಿಂದ ಬೇಸತ್ತು 2017ರಲ್ಲಿ ವಿಚ್ಛೇದನ ಪಡೆದ ಬಳಿಕ ಸುನೀತಾ ಮೈಸೂರಿನಲ್ಲಿ ತಮ್ಮ, ತಂದೆಯೊಂದಿಗೆ ವಾಸವಾಗಿದ್ದಳು. ಇದರಿಂದ ಕೋಪಗೊಂಡ ಕಾರ್ತಿಕ್ 2017ರ ಜೂನ್ 13ರಂದು ಮನೆಗೆ ನುಗ್ಗಿ ಡ್ರಾೃಗನ್‌ನಿಂದ ಚುಚ್ಚಿ, ಕತ್ತು ಕೊಯ್ದು ಕೊಲೆ ಮಾಡಿದ್ದ. ಅಲ್ಲದೇ ಕೊಲೆಗೆ ಉಪಯೋಗಿಸಿದ ಆಯುಧ, ಬಟ್ಟೆ, ಮೊಬೈಲ್ ಫೋನ್ ಇಟ್ಟು ರೈಲ್ವೆ ಶೆಡ್‌ನ ಬಚ್ಚಿಟ್ಟಿಟು ತಲೆಮರೆಸಿಕೊಂಡಿದ್ದ.
ಪ್ರಕರಣ ದಾಖಲಿಸಿಕೊಂಡ ವಿದ್ಯಾರಣ್ಯಪುರಂ ತನಿಖಾಧಿಕಾರಿ ಓಂಕಾರಪ್ಪ ಅವರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲನಗೌಡ ಅವರು ಆರೋಪ ಸಾಬೀತಾಗಿದ್ದರಿಂದ ಆರೋಪಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಬಿ.ಎಂ.ವೀಣಾ ವಕಾಲತ್ತು ವಹಿಸಿದ್ದರು.