

ಹಿರಿಯೂರು: ಪ್ರತಿಯೊಬ್ಬರೂ ಬದುಕಿದ್ದಾಗ ಕಣ್ಣು ಜೋಪಾನ ಮಾಡಿಕೊಂಡು ನಿಧನದ ನಂತರ ದಾನ ಮಾಡುವ ಮೂಲಕ ನಾವು ಜೀವಂತವಾಗಿ ಇರುವ ಕೆಲಸ ಮಾಡಬೇಕು ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಕಿರಣ್‌ಕುಮಾರ್ ತಿಳಿಸಿದರು.
ನಗರದ ಥಿಯಾಸಫಿಕಲ್ ಸೊಸೈಟಿ ಆವರಣದಲ್ಲಿ ಭಾರತೀಯ ರೆಡ್‌ಕ್ರಾಸ್ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೇತ್ರ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೀವನದ ಪ್ರತಿ ಹಂತದಲ್ಲೂ ಕಣ್ಣುಗಳ ಆರೋಗ್ಯದ ಬಗ್ಗೆ ಉದಾಸೀನ ತೋರಿದರೆ ವೃದ್ಧಾಪ್ಯದಲ್ಲಿ ಅದರ ಮಹತ್ವ ಅರಿವಾಗುವುದು. ಕಣ್ಣುಗಳನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾದ ಡಾ.ರಾಜ್‌ಕುಮಾರ್, ಪುನೀತ್ ರಾಜಕುಮಾರ್ ಅವರನ್ನು ಆದರ್ಶ ಮಾಡಿಕೊಳ್ಳಬೇಕು ಎಂದರು.
ರೆಡ್‌ಕ್ರಾಸ್ ಅಧ್ಯಕ್ಷ ಸುಂದರ್‌ರಾಜ್ ಮಾತನಾಡಿ, ರೆಡ್‌ಕ್ರಾಸ್ ಹಾಗೂ ರೋಟರಿ ಸಂಸ್ಥೆಗಳು ಸೇವಾ ಕಾರ್ಯಗಳಲ್ಲಿ ಹೆಚ್ಚು ನೇತ್ರ ತಪಾಸಣೆ ಶಿಬಿರದ ಮೂಲಕ ಆರ್ಥಿಕ ದುರ್ಬಲರಿಗೆ ಉಚಿತವಾಗಿ ಚಿಕಿತ್ಸೆ ಮತ್ತು ಲೇಸರ್ ಅಳವಡಿಸಿ ನೆರವಾಗಿವೆ ಎಂದು ಹೇಳಿದರು.
ರೋಟರಿ ಜಿಲ್ಲಾ ಕಾರ್ಯದರ್ಶಿ ಎಂ.ಎಸ್. ರಾಘವೇಂದ್ರ ಮಾತನಾಡಿ, ಡಾ. ರಾಜ್‌ಕುಮಾರ್, ಪುನೀತ್ ರಾಜಕುಮಾರ್ ಆದರ್ಶದಂತೆ ನಾಗರಿಕರು ನೇತ್ರದಾನಕ್ಕೆ ಮುಂದಾಗಿದ್ದು ಬದುಕಿನ ಸಾರ್ಥಕತೆಗೆ ಮುಂಚೂಣಿ ಎಂದರು.
ಥಿಯಾಸಫಿಕಲ್ ಸೊಸೈಟಿ ಅಧ್ಯಕ್ಷ ಡಿ.ದೇವರಾಜ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ಎ.ರಾಘವೇಂದ್ರ, ಪದಾಧಿಕಾರಿಗಳಾದ ಸಣ್ಣಭೀಮಣ್ಣ, ಜೋಗಪ್ಪ, ಸಿ.ನಾರಾಯಣ ಆಚಾರ್, ಬಿ.ಕೆ.ನಾಗಣ್ಣ, ನೇತ್ರಾ ತಪಾಸಣಾಧಿಕಾರಿ ಮೋಹನ್, ಕೇಶವಮೂರ್ತಿ ಇತರರಿದ್ದರು.