ಆಯುರ್ವೇದದಿಂದ ಆಯಸ್ಸು ವೃದ್ಧಿ: ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ

27 RPT 1
ಹೊಂಬುಜ ಜೈನ ಮಠದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ರಿಪ್ಪನ್‌ಪೇಟೆ: ಅನಾದಿ ಕಾಲದಿಂದ ಮನುಷ್ಯ ಆರೋಗ್ಯ ವೃದ್ಧಿಗಾಗಿ ಆಯುರ್ವೇದ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದ್ದು, ಇದು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಆಯಸ್ಸು ಹೆಚ್ಚಿಸುತ್ತದೆ ಎಂದು ಹೊಂಬುಜ ಜೈನಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಹೊಂಬುಜ ಜೈನಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಆಪ್ತಾಸ್ ಆಯುರ್ವೇದ ಮತ್ತು ತೀರ್ಥಹಳ್ಳಿಯ ಶ್ರೀ ಪೂಜ್ಯಪಾದ ಚಿಕಿತ್ಸಾಲಯದಿಂದ ಬುಧವಾರ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಮತ್ತು ಸುವಾಚ ಆಯುರ್ವೇದ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಆರೋಗ್ಯ ಸದೃಢವಾಗಿಟ್ಟುಕೊಳ್ಳಲು ದಿನಚರಿಯಲ್ಲಿ ಕಾಯ, ವಾಚ, ಮನಸ್ಸು, ಶುದ್ಧವಾಗಿಟ್ಟುಕೊಂಡು, ವಾತ, ಪಿತ್ತ, ಕಫಾದಿ ದೋಷಗಳ ನಿರ್ವಹಣೆ ಅವಶ್ಯ. ದೇಶೀಯ ಪದ್ಧತಿಯಲ್ಲಿ ಪರಿಸರದಲ್ಲೇ ಸಿಗುವ ಅನೇಕ ಸಸ್ಯ ಪ್ರಭೇದಗಳಲ್ಲಿ ಔಷಧ ಮತ್ತು ಆಹಾರ ಕ್ರಮಗಳನ್ನು ತಿಳಿಸಲಾಗಿದೆ. ಮನೆಮದ್ದು ಪದ್ಧತಿಯನ್ನೇ ವೃದ್ಧಿಸಿಕೊಂಡ ವಿಜ್ಞಾನವೇ ಆಯುರ್ವೇದ. ಈ ಪದ್ಧತಿಯಲ್ಲಿ ಮೂಲವನ್ನು ಪತ್ತೆಹಚ್ಚಿ ರೋಗಗಳನ್ನು ನಿರ್ಮೂಲನೆ ಮಾಡಲಾಗುತ್ತದೆ. ಹಾಗೂ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಿಂದ ದೀರ್ಘಕಾಲದವರೆಗೆ ರೋಗಮುಕ್ತ ಜೀವನ ನಡೆಸಬಹುದು ಎಂದರು.
ಡಾ. ಜೀವಂಧರ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಸಿರಿಗನ್ನಡ ವೇದಿಕೆ ಅಧ್ಯಕ್ಷೆ ಶಶಿಕಲಾ, ಶಾಂತವೀರೇಶ್ವರ ಆಯುರ್ವೇದ ಕಾಲೇಜಿನ ಸ್ಥಾನಿಕ ಆಡಳಿತ ಅಧಿಕಾರಿ ವಿ.ಎಚ್.ಕೆ ಹಿರೇಮಠ, ಮಹಾವೀರ ಆಜ್ರಿ, ತಾಲೂಕು ಯೋಜನಾಧಿಕಾರಿ ಕೆ.ಬೇಬಿ, ಶಿವಪ್ಪ, ಶುಶ್ರೂತ್ ಜೈನ್, ಸಾದಿತಾ ಜೈನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net