

ಅಂಕೋಲಾ: ಸರ್ಕಾರದ ಸಮಸ್ತ ಯೋಜನೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯಕ್ಕೆ ಸ್ಥಳೀಯ ಯುವಕರು ಮುಂದಾಗಿ ಅವರ ಕಷ್ಟಗಳಿಗೆ ಸ್ಪಂದಿಸುವಂತಾಗಬೇಕು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದರು.
ತಾಲೂಕಿನ ತೆಂಕಣಕೇರಿಯ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೀವನದಲ್ಲಿ ಅನುಭವವೇ ಸಾಧನೆಗೆ ದಾರಿದೀಪ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವಂತಾಗಬೇಕು ಎಂದರು.
ಜಿಪಂ.ಮಾಜಿ ಸದಸ್ಯ ಜಗದೀಶ ಜಿ. ನಾಯಕ ಮೊಗಟಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಮನಸುಗಳ ತವರೂರುರಾದ ತೆಂಕಣಕೇರಿ ಗ್ರಾಮದಲ್ಲಿ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯ ಪತ್ರಕರ್ತ ವಿಠ್ಠಲದಾಸ್ ಕಾಮತ ಮಾತನಾಡಿದರು. ಮಹಾಲಸಾ ರಂಗಸಜ್ಜಿಕೆಯ ಮಾಲೀಕ ಮೋಹನ ನಾಯ್ಕ, ಹಾರ್ಮೋನಿಯಂ ವಾದಕ ಅಭಯ ಮರಬಳ್ಳಿ, ಶಿಕ್ಷಕ ಗಣೇಶ ನಾಗ್ವೇಕರ, ಸಂಗೀತ ಶಿಕ್ಷಕ ಕೃಷ್ಣಮೂರ್ತಿ ಗುನಗಾ, ತಬಲಾ ವಾದಕ ಶಶಿಧರ ಭಟ್, ಕೃಷಿ ಸಾಧಕಿ ತುಳಸೀ ಗೌಡ, ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹರಿಕಂತ್ರ ಜೂಗ, ನಿವೃತ್ತ ಪೊಲೀಸ್ ಅಧಿಕಾರಿ ಹನುಮಂತ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ರ‌್ಯಾಂಕ್ ಪಡೆದ ಮಾನ್ಯ ಮಂಜುನಾಥ ನಾಯ್ಕ, ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಹಾಗೂ ಜಿಲ್ಲೆಗೆ ನಾಲ್ಕನೇ ಸ್ಥಾನ ಪಡೆದ ಅಶ್ವಿನಿ ಬಾಲಕೃಷ್ಣ ನಾಯ್ಕ, ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ ಶ್ರೀನಿಧಿ ಸುರೇಶ ನಾಯ್ಕ, ತ್ರಿಶಾ ನಾಗರಾಜ ರಾಯ್ಕರ ಅವರನ್ನು ಪುರಸ್ಕರಿಸಲಾಯಿತು.
ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ, ಬೊಬ್ರುವಾಡ ಗ್ರಾಪಂ. ಸದಸ್ಯ ಜೈವಂತ ನಾಯ್ಕ, ಮಾಜಿ ಸದಸ್ಯ ರಾಜೇಶ ಎಂ ನಾಯ್ಕ, ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಅನಂದು ನಾಯ್ಕ, ನಿವೃತ್ತ ಮುಖ್ಯಾಧ್ಯಾಪಕಿ ಸುಶೀಲಾ ಆಗೇರ ಮುಂತಾದವರು ಉಪಸ್ಥಿತರಿದ್ದು ಮಾತಾ ನಾಡಿದರು. ಪತ್ರಕರ್ತ ಸುಭಾಷ ಕಾರೇಬೈಲ್ ನಿರ್ವಹಿಸಿದರು.