ಧರ್ಮ ಆಚರಣೆಯಿಂದ ಜೀವನ ವಿಕಾಸ-ಅಭ್ಯುದಯ

Rambhapur Shree
Published on

ಬಂಕಾಪುರ: ಮನುಷ್ಯ ಬಹಳಷ್ಟು ಒತ್ತಡದಲ್ಲಿ ಸಿಲುಕಿದ್ದಾನೆ. ಇದರಿಂದ ಮನಸ್ಸು ದುರ್ಬಲಗೊಳ್ಳುತ್ತದೆ. ಶಾಂತಿ, ನೆಮ್ಮದಿಗಾಗಿ ಒಂದಿಷ್ಟು ಅಧ್ಯಾತ್ಮ ಚಿಂತನೆಯ ಅವಶ್ಯಕತೆ ಇದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.

ಪಟ್ಟಣದ ಅರಳೆಲೆ ಹಿರೇಮಠದಲ್ಲಿ ಲಿಂ. ಶ್ರೀರುದ್ರಮುನಿ ಶಿವಾಚಾರ್ಯರ 50ನೇ ವರ್ಷದ ಸುವರ್ಣ ಪುಣ್ಯ ಸ್ಮರಣೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಧರ್ಮ ಜಾಗೃತಿ ಭಾವೈಕ್ಯ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜೀವನದಲ್ಲಿ ಹಣ ಸಂಪಾದನೆಯೊಂದೇ ಗುರಿಯಲ್ಲ. ಸತ್ಯ ಮತ್ತು ಧರ್ಮದ ವಾತಾವರಣದಲ್ಲಿ ಬೆಳೆದು ಬಲಗೊಳ್ಳಬೇಕಾದರೆ ಗುರುವೇ ಮೂಲನಾಗಿದ್ದಾನೆ. ಜೀವನ ವಿಕಾಸ ಮತ್ತು ಅಭ್ಯುದಯ ಧರ್ಮದ ಆಚರಣೆಯಿಂದ ದೊರಕುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ಬದುಕಿಗೆ ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲ ಚಿಂತನಗಳಿಂದ ಬದುಕು ಬಲಗೊಳ್ಳಲು ಸಾಧ್ಯವಾಗುತ್ತದೆ. ಶಿವನನ್ನು ಪೂಜಿಸಿದರೆ ದೇವಾನುದೇವತೆಗಳನ್ನು ಪೂಜಿಸಿದ ಫಲ ಪ್ರಾಪ್ತವಾಗುತ್ತದೆ ಎಂದರು.

ನೇತೃತ್ವ ವಹಿಸಿದ್ದ ಪಟ್ಟಾಧ್ಯಕ್ಷ ರೇವಣಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ಲಿಂಗೈಕ್ಯ ಶ್ರೀ ಗುರು ರುದ್ರಮುನಿ ಶಿವಾಚಾರ್ಯರು ಭಕ್ತರ ಒಳಿತಿಗಾಗಿ ಬಹಳಷ್ಟು ಶ್ರಮಿಸಿದ್ದನ್ನು ಮರೆಯಲಾಗದು ಎಂದರು.

ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ, ಅರಿವಿನ ದಾರಿಯಲ್ಲಿ ನಡೆಸುವುದೇ ನಿಜವಾದ ಗುರುವಿನ ಕರ್ತವ್ಯ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಪುಣ್ಯದ ನಾಡಿನ ಆಚಾರ್ಯರು, ಋಷಿ ಮುನಿಗಳು ಧರ್ಮದ ಮೂಲಕ ಮನುಷ್ಯನ ಬದುಕಿಗೆ ಭಾವೈಕ್ಯ ಬೆಸೆದಿದ್ದಾರೆ. ಇಡೀ ವಿಶ್ವವೇ ಇಂದು ಭಾರತದತ್ತ ಮುಖ ಮಾಡಿ ನೋಡಲು ಇಲ್ಲಿನ ಧರ್ಮ ಸಂಸ್ಕೃತಿಯೇ ಕಾರಣ ಎಂದರು.

ಅರಳೆಲೆಮಠದ ಶ್ರೀ ರೇವಣಶಿದ್ಧೇಶ್ವರ ಶಿವಾಚಾರ್ಯರು, ಮಳಲಿಮಠದ ಶ್ರೀನಾಗಭೂಷಣ ಶಿವಾಚಾರ್ಯರು, ಡಾ.ಆರ್.ಎಸ್. ಅರಳೆಲೆಮಠ, ಸುಖೇನ್ ಅರಳೆಲೆಮಠ, ಡಾ. ಡಿ.ಎ. ಗೊಬ್ಬರಗುಂಪಿ, ಪ್ರೊ. ಸಿ.ಎಚ್. ತಾವರಗೊಂದಿ, ಡಾ. ಗುರುಪಾದಯ್ಯ ಸಾಲಿಮಠ ಮತ್ತಿತರರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net