ಬರವಣಿಗೆಗೆ ಬದುಕಿನ ವಿದ್ಯಮಾನಗಳೇ ಪ್ರೇರಣೆ

30 vikram 11
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನನ್ನ ಬದುಕಿನ ವಿದ್ಯಮಾನಗಳೇ ಬರವಣಿಗೆಯ ಮೂಲ ಪ್ರೇರಣೆ. ಬದುಕಿನಲ್ಲಿ ಅನುಭವಿಸಿದ ನೋವು-ನಲಿವುಗಳೇ ಕಾವ್ಯಗಳಾಗಿ ಅಭಿವ್ಯಕ್ತಿಗೊಂಡಿವೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಲೇಖಕರೊಂದಿಗೆ ಭೇಟಿ ಕಾರ್ಯಕ್ರಮದಲ್ಲಿ ಅವರು ತಮ್ಮ ಬದುಕು, ಬರಹದ ಕುರಿತು ಮಾಹಿತಿ ಹಂಚಿಕೊಂಡರು.
ನನ್ನ ಬದುಕು ತೆರೆದಿಟ್ಟ ಪುಸ್ತಕದಂತಿದ್ದು, ನನ್ನ ಕಷ್ಟಗಳು ಮತ್ತು ಕಾಲಕಾಲಕ್ಕೆ ಎದುರಾದ ಸವಾಲುಗಳು ನನ್ನನ್ನು ಈ ಮಟ್ಟಕ್ಕೆ ರೂಪಿಸಿವೆ. ಆ ಕಾಲದಲ್ಲಿ ಮಹಿಳೆಯರು ಶಿಕ್ಷಣ ಪಡೆಯುವುದು ಅತ್ಯಂತ ಸವಾಲಿನ ಸಂಗತಿಯಾಗಿತ್ತು. ಪ್ರಾಥಮಿಕ ಶಿಕ್ಷಣದಲ್ಲಿ ಪ್ರತಿಭಾವಂತೆಯಾಗಿದ್ದ ನಾನು, ಬಡತನದ ಕಾರಣಕ್ಕೆ ಬಹಳಷ್ಟು ನಲುಗಬೇಕಾಯಿತು. ಆದರೆ ನನ್ನ ಅಜ್ಜಿ ಬೆಂಗಾವಲಾಗಿ ನಿಂತಿದ್ದಲ್ಲದೇ, ಹೆಣ್ಣುಮಕ್ಕಳಿಗೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆ ಎಷ್ಟು ಮಹತ್ವದ್ದು ಎಂದು ತಿಳಿಸಿಕೊಟ್ಟರು ಎಂದರು.
ನನ್ನ ಬರವಣೆಗೆಯ ಹಿಂದೆ ಬದುಕಿನಲ್ಲಿ ಎದುರಾದ ಸಂಕಟಗಳ ಸರಮಾಲೆಯೇ ಅನಾವರಣಗೊಂಡಿದೆ. ಹಾಗೆಂದ ಮಾತ್ರಕ್ಕೆ ನಾವು ನಿರಾಶಾವಾದಿಗಳು ಆಗಬೇಕಿಲ್ಲ. ನಡೆದುಹೋದ ಘಟನೆಗಳಿಗೆ ಪಶ್ಚಾತಾಪಪಡುತ್ತ ಕುಳಿತುಕೊಂಡರೆ ಬದುಕು ಮತ್ತಷ್ಟು ದುಸ್ತರವಾಗುತ್ತದೆ. ಯುವ ಜನಾಂಗದವರು ಬದುಕಿನ ಉತ್ಸಾಹ ಕಳೆದುಕೊಳ್ಳದೆ ಸ್ವಸ್ಥ ಜೀವನ ನಡೆಸಲು ಮುಂದಾಗಬೇಕು. ಆರೋಗ್ಯಕರ ಮನಸ್ಸಿನಿಂದ ಮಾತ್ರ ಆರೋಗ್ಯಕರ ಸಾಹಿತ್ಯ ಬರಲು ಸಾಧ್ಯ ಎಂದರು.
ನಂತರ ನಡೆದ ಸಂವಾದದಲ್ಲಿ ಶಂಕರ ಹಲಗತ್ತಿ, ವೆಂಕಟೇಶ ಮಾಚಕನೂರ, ಸತೀಶ ಕುಲಕರ್ಣಿ, ರಾಜೇಶ್ವರಿ ಮಹೇಶ್ವರಯ್ಯ, ಡಿ.ಎಂ. ಹಿರೇಮಠ, ಶ್ರೀನಿವಾಸ ವಾಡಪ್ಪಿ, ಸರಸ್ವತಿ ಭೋಸಲೆ, ಶಕುಂತಲಾ ಸಿಂಧೂರ, ಅಶೋಕ ಶೆಟ್ಟರ, ಅರವಿಂದ ಯಾಳಗಿ, ಪಾರ್ವತಿ ಹಾಲಭಾವಿ, ಬಾಳಣ್ಣ ಶೀಗಿಹಳ್ಳಿ, ಸುನಂದಾ ಕಡಮೆ, ವಿಶ್ವೇಶ್ವರಿ ಹಿರೇಮಠ, ಇತರರು ಪಾಲ್ಗೊಂಡಿದ್ದರು.
ಚನ್ನಪ್ಪ ಅಂಗಡಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net