

ಬೆಳಗಾವಿ: ನಗರ ಸೇರಿ ಜಿಲ್ಲಾದ್ಯಂತ ಮೂರ‌್ನಾಲ್ಕು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ಇಂದೂ ಅಧಿಕ ಮಳೆ ಇರುವ ಕಾರಣ ಶಾಲಾ-ಕಾಲೇಜುಗಳಿಗೆ ರಜೆ ೋಷಣೆ ಮಾಡಲಾಗಿದೆ.
ಕಳೆದ ಮೂರು ವಾರದ ಅವಧಿಯಲ್ಲಿ ಬೆಳಗಾವಿ ನಗರ, ಗ್ರಾಮೀಣ ಭಾಗದಲ್ಲಿ 130ಮಿ.ಮೀ ಮಳೆ ಸುರಿದಿದೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ದೂಧಗಂಗಾ, ವೇದಗಂಗಾ, ಮಾರ್ಕೆಂಡೇಯ ನದಿಗಳಲ್ಲಿ ಒಳಹರಿವು ಹೆಚ್ಚಳವಾಗಿದ್ದರಿಂದ ಹಿಡಕಲ್, ನವೀಲುತೀರ್ಥ ಜಲಾಶಯಗಳಿಗೆ ಬರುವ ನೀರಿನ ಪ್ರಮಾಣ ಗಣನೀಯವಾಗಿ ಏರತೊಡಗಿದೆ.
ಶ್ರಾವಣ ಸೋಮವಾರದ ಹಿನ್ನೆಲೆ ಅನೇಕ ದೇವಸ್ಥಾನಗಳಲ್ಲಿ ರಥೋತ್ಸವ, ಮಹಾಪ್ರಸಾದ ಸೇರಿದಂತೆ ವಿವಿಧ ಪೂಜೆಗಳು ಸುರಿಯುವ ಮಳೆಯಲ್ಲಿಯೇ ನಡೆದವು. ಬಹುತೇಕ ದೇವಸ್ಥಾನಗಳಲ್ಲಿ ಮಳೆಯ ಕಾರಣಕ್ಕೆ ದಟ್ಟಣೆ ಕಂಡು ಬರಲಿಲ್ಲ. ಭಾನುವಾರ ರಾತ್ರಿಯಿಂದಲೇ ಸುರಿಯುತ್ತಿರುವ ಮಳೆ ಸೋಮವಾರ ಬೆಳಗ್ಗೆ ನಿಂತಿರಲಿಲ್ಲ. ಹೀಗಾಗಿ ಸೋಮವಾರ ಬೆಳಗ್ಗೆ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಸಂಜೆ ಹೊತ್ತಿಗೆ ಮಳೆ ಹೆಚ್ಚುತ್ತಲೇ ಹೊರಟಿತ್ತು. ಈ ಕಾರಣಕ್ಕೆ ರಜೆ ಮಂಗಳವಾರಕ್ಕೂ ವಿಸ್ತರಿಸಲಾಯಿತು.
ನಗರದ ಕೆಲ ವೃತ್ತಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಣೆಗೊಂಡಿದ್ದು, ಕೆಲ ರಸ್ತೆಗಳಲ್ಲಿ ಹಳ್ಳದಂತೆ ನೀರು ಹರಿಯುತ್ತಿದೆ. ನೀರಿನ ಮಧ್ಯದಲ್ಲಿಯೇ ವಾಹನ ಚಲಾಯಿಸಲು ಅನೇಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ಬೆಳಗಾವಿ ನಗರದಲ್ಲಿ ಸೂರ್ಯನ ದರ್ಶನವಾಗಿಲ್ಲ.