ಜೀವಿತ ಪ್ರಮಾಣ ಪತ್ರ ಸಲ್ಲಿಕೆಗೆ ಪರದಾಟ

life
Published on

ಉಡುಪಿ: ಸರ್ಕಾರದಿಂದ ವಿವಿಧ ಪಿಂಚಣಿ ಪಡೆಯುವವರು ಪ್ರತಿ ನವೆಂಬರ್, ಡಿಸೆಂಬರ್‌ನಲ್ಲಿ ಪಿಂಚಣಿ ಪಡೆಯುವ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಿಗೆ ಜೀವನ್ ಪ್ರಮಾಣ್ ಅಥವಾ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು ಕಡ್ಡಾಯ. ಆದರೆ ಅನೇಕ ಕಡೆ ವಯೋವೃದ್ಧರ ಆಧಾರ್ ಹೆಬ್ಬೆಟ್ಟು ಹೊಂದಾಣಿಕೆಯಾಗದೆ ಜೀವಿತ ಪ್ರಮಾಣ ಪತ್ರ ಸಲ್ಲಿಕೆಗೆ ಪರದಾಡುವಂತಾಗಿದೆ.

ಆಧಾರ್ ಫಿಂಗರ್‌ಪ್ರಿಂಟ್ ಹೊಂದಾಣಿಕೆಯಾಗದಿದ್ದರೆ ಐರಿಸ್ ಸ್ಕಾೃನರ್ ಮೂಲಕ ಪ್ರಮಾಣ ಪತ್ರ ಪಡೆಯಬಹುದು. ಆದರೆ ಬ್ಯಾಂಕ್‌ಗಳಲ್ಲಿ ಥಂಬ್ ಮಷಿನ್ ಮಾತ್ರ ಇದ್ದು, ಐರಿಸ್ ಸ್ಕಾೃನರ್ ಇಲ್ಲದ ಕಾರಣ ಇಪಿಎಫ್ ವಲಯ ಕಚೇರಿಗೆ ಬಂದು ಪ್ರಮಾಣ ಪತ್ರ ನೀಡುವ ಅನಿವಾರ್ಯತೆಗೆ ಪಿಂಚಣಿದಾರರು ಸಿಲುಕಿದ್ದಾರೆ.

ಇಪಿಎಫ್ ಕಚೇರಿಗೆ ತೆರಳಿದರೆ ಬ್ಯಾಂಕುಗಳಲ್ಲಿ ಪ್ರಮಾಣಪತ್ರ ಸಲ್ಲಿಸಿ ಎನ್ನುತ್ತಾರೆ. ಬ್ಯಾಂಕ್‌ನಲ್ಲಿ ಕೇಳಿದರೆ ನಮ್ಮಲ್ಲಿ ಐರಿಸ್ ಸ್ಕಾೃನರ್ ಇಲ್ಲ. ಅಂಚೆ ಕಚೇರಿಗಳಿಗೆ ಹೋಗಿ ಎನ್ನುತ್ತಾರೆ. ಅಂಚೆ ಇಲಾಖೆಯಲ್ಲಿ ಶೇ.50ರಷ್ಟು ಪೋಸ್ಟ್‌ಮ್ಯಾನ್‌ಗಳಿಗೆ ಐಪಿಪಿಬಿ ಮೊಬೈಲ್ ಕೊಡಲಾಗಿದೆ. ಇಂತಹವರಲ್ಲಿ ಜೀವಿತ ಪ್ರಮಾಣಪತ್ರ ಸಿಗುತ್ತದೆ. ಆದರೆ ಫಿಂಗರ್ ಪ್ರಿಂಟ್ ತಾಳೆಯಾಗದೆ ಇದ್ದರೆ ಅವರಿಗೂ ಪರ್ಯಾಯ ಮಾರ್ಗಗಳಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ವಿಧವಾ ಮಾಸಾಶನ, ವೃದ್ಧಾಪ್ಯ ವೇತನ ಪಡೆಯುವವರು ಆಧಾರ್ ನೋಂದಣಿ ಕೇಂದ್ರಗಳಿಗೆ ಅಲೆದಾಡುವಂತಾಗಿದೆ. ನಿಗದಿತ ಸಮಯಕ್ಕೆ ಸಲ್ಲಿಸದಿದ್ದರೆ ಸರ್ಕಾರದ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇದೆ.

ಈ ಬಗ್ಗೆ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಭವಿಷ್ಯನಿಧಿ ಸಂಘಟನೆ ಕಮಿಷನರ್ ಅಜಯ್ ಸಿಂಗ್, ಪಿಂಚಣಿ ಪಡೆಯುವವರು ಜೀವಿತ ಪ್ರಮಾಣಪತ್ರ ಸಲ್ಲಿಕೆಗೆ ಫೆಬ್ರವರಿ 28ರವರೆಗೆ ಸಮಯವಿದೆ. ಪಿಂಚಣಿ ಜಮೆಯಾಗುತ್ತಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲೇ ಸಲ್ಲಿಸಬಹುದು. ಅಲ್ಲಿ ಸಮಸ್ಯೆಯಾದರೆ ಮಾತ್ರ ಉಡುಪಿ ಕಚೇರಿಗೆ ಬರಬಹುದು. 17,531 ಪಿಂಚಣಿದಾರರಲ್ಲಿ ಈಗಾಗಲೇ 10,742 ಮಂದಿ ಜೀವಿತ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪಿಂಚಣಿ ಪಡೆಯುವ ಬ್ಯಾಂಕ್‌ನ ಯಾವುದೇ ಸಮೀಪದ ಶಾಖೆಗಳಿಗೆ ಹೋದರೂ ಜೀವಿತ ಪ್ರಮಾಣ ಪತ್ರ ಪಡೆಯಬಹುದು. ಸದ್ಯಕ್ಕೆ ಬ್ಯಾಂಕ್‌ಗಳಲ್ಲಿ ಐರಿಸ್ ಸ್ಕಾೃನರ್ ಅಳವಡಿಕೆ ಮಾಡಿಲ್ಲ. ವೈದ್ಯಕೀಯ ಕಾರಣದಿಂದ ಜೀವಿತ ಪ್ರಮಾಣ ಪಡೆಯುವುದು ಕಷ್ಟವಾದರೆ ಬ್ಯಾಂಕ್‌ಗಳ ಶಾಖಾ ಪ್ರಬಂಧಕರು ಮನೆಗೆ ಹೋಗಿ ಪ್ರಮಾಣಪತ್ರವನ್ನು ನೀಡಲಿದ್ದಾರೆ.

- ರುದ್ರೇಶ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net