

ಸಾಗರ: ಅಂಕದ ಬೆನ್ನೇರಿದರೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಅನುಭವದ ಮೂಲಕ ಜೀವನ ಮುನ್ನಡೆಯುತ್ತದೆ. ಸಾಹಿತ್ಯ, ಕಲೆಯಲ್ಲಿ ಯುವ ಜನರು ಹೆಚ್ಚು ತೊಡಗಿಕೊಳ್ಳಬೇಕು ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಅಧ್ಯಯನದ ಮೂಲಕ ಮನಷ್ಯ ಬೆಳೆಯುತ್ತಾನೆ. ಹಾಗಾಗಿ ವಿದ್ಯಾರ್ಥಿಗಳು ಕಾಲೇಜು ದಿನಗಳಿಂದಲೇ ಓದಿನ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಒಂದು ಕಾಲದಲ್ಲಿ ಜೂನಿಯರ್ ಕಾಲೇಜು ಎಂದರೆ ಅಸಡ್ಡೆ ತೋರುತ್ತಿದ್ದ ಜನ ಇಂದು ಈ ಕಾಲೇಜಿಗೆ ಸೇರಲು ನನ್ನಿಂದ ಶಿಫಾರಸು ಪತ್ರ ಪಡೆಯುತ್ತಿದ್ದಾರೆ. ಇದಕ್ಕೆ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರ ಪರಿಶ್ರಮ ಕಾರಣ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಪದವಿ ಕಾಲೇಜುಗಳಿಗೆ ಬೇರೆ ಮೂಲಗಳಿಂದ ಹಣ ಬರುತ್ತದೆ. ಆದರೆ ಪದವಿಪೂರ್ವ ಕಾಲೇಜುಗಳಿಗೆ ಹಣಕಾಸಿನ ಕೊರತೆ ಇದ್ದು ಸರ್ಕಾರ ಈ ಕಾಲೇಜುಗಳ ಬಗ್ಗೆ ವಿಶೇಷ ಆಸಕ್ತಿ ತೋರಬೇಕು ಎಂದರು.
ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಕೆ.ಸಿ.ಸತ್ಯನಾರಾಯಣ, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಉಪನ್ಯಾಸಕ ಕೆ.ವಿ.ರವೀಂದ್ರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಭವ್ಯಾ ಕೃಷ್ಣಮೂರ್ತಿ, ಬಸವರಾಜ್, ಪೂರ್ಣಿಮಾ, ಡಾ. ಸರ್ಫರಾಜ್ ಚಂದ್ರಗುತ್ತಿ, ಪ್ರಿಯಕುಮಾರ್, ಡಾ. ಕೆ.ಎಸ್.ದೇವೇಂದ್ರ ಇದ್ದರು.