ಗುಲಾಬಿ ಹೂವಿನಲ್ಲಿ ಅರಳಿತು ಬದುಕು

26 anr 3
ತಮ್ಮಡಿಹಳ್ಳಿ ಗ್ರಾಮದಲ್ಲಿ ಹೂವಿನ ಕೃಷಿನಿರತ ಅನ್ನಪೂರ್ಣಮ್ಮ ದಂಪತಿ.
Published on

ಆಯನೂರು: ತಮ್ಮಡಿಹಳ್ಳಿ ಗ್ರಾಮದ ರೈತ ಮಹಿಳೆಯೊಬ್ಬಳು ತನ್ನ ಕುಟುಂಬದ ಸಹಕಾರದಿಂದ ಗುಲಾಬಿ ಕೃಷಿ ಮಾಡಿ ಪ್ರತಿ ವರ್ಷ ಸರಿಸುಮಾರು 3ರಿಂದ 4 ಲಕ್ಷ ರೂ. ಆದಾಯ ಗಳಿಸುತ್ತಿದ್ದಾಳೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಎಂಬುದಕ್ಕೆ ಇದೊಂದು ತಾಜಾ ನಿದರ್ಶನವಾಗಿದೆ. ಇದಕ್ಕೆ ಬೆನ್ನುಲುಬಾಗಿದ್ದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ.
ತಮ್ಮಡಿಹಳ್ಳಿಯ ಅನ್ನಪೂರ್ಣಮ್ಮ ಧರ್ಮಸ್ಥಳ ಯೋಜನೆಯ ಹೊನ್ನಮ್ಮ ದೇವಿ ಸಂಘದಲ್ಲಿ 10 ವರ್ಷದಿಂದ ಸಕ್ರಿಯ ಸದಸ್ಯೆ. ಇವರನ್ನು ಸಂಸ್ಥೆಯಿಂದ ಪ್ರಗತಿ ಪಥ ರೈತರ ಭೇಟಿ ಕಾರ್ಯಕ್ರಮದಡಿ 2 ವರ್ಷಗಳ ಹಿಂದೆ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ಪ್ರವಾಸದಲ್ಲಿ ರೈತರ ಸಾಧನೆ ಕಂಡು ಪ್ರಭಾವಿತರಾದ ಅವರು ಮನೆಗೆ ಬಂದು ಗಂಡನಿಗೆ ವಿಷಯ ತಿಳಿಸಿ ನಾವು ಹೂವಿನ ಕೃಷಿ ಮಾಡೋಣ ಎದು ಹೇಳಿದ್ದಾರೆ.
ಮೊದಲು ಅರ್ಧ ಎಕರೆ ಜಮೀನಿನಲ್ಲಿ 1,500 ಸಾವಿರ ಬಟನ್ ರೋಸ್ (ರೆಡ್ ರೂಬಿ) ಗಿಡಗಳನ್ನು ಕೃಷಿ ಮಾಡಿದ್ದಾರೆ. ನಂತರ ಮತ್ತೆ ಕಾಲು ಎಕರೆ ಕೃಷಿ ಮಾಡಿದ್ದಾರೆ. ಒಟ್ಟು ಮುಕ್ಕಾಲು ಎಕರೆಯಲ್ಲಿ ಗುಲಾಬಿ ಗಿಡದ ಕೃಷಿ ಮಾಡಿದ್ದು ಇದಕ್ಕಾಗಿ ಧರ್ಮಸ್ಥಳ ಯೋಜನೆಯಿಂದ 2 ಲಕ್ಷ ರೂ. ಸಾಲ ಕೂಡ ಪಡೆದಿದ್ದರು.
ನಾಟಿ ಮಾಡಿದ 3 ತಿಂಗಳು ಹೂ ಸಿಗುವುದಿಲ್ಲ. ನಾಲ್ಕು ತಿಂಗಳಿಂದ ಹೂ ಸಿಗಲು ಆರಂಭವಾಗುತ್ತದೆ. ವರ್ಷದ ನಂತರ ಹೆಚ್ಚು ಹೂ ಸಿಗುವಂತಾಗಿ ಶಿವಮೊಗ್ಗದ ಮಂಡಿಗೆ ಕಳುಹಿಸಿದೆವು. ಮಾಮೂಲಿ ದಿನಗಳಲ್ಲಿ ಒಂದು ಕೆಜಿ ಹೂವಿಗೆ 50ರಿಂದ 100 ರೂ ವರೆಗೂ ಸಿಗುತ್ತದೆ. ಹಬ್ಬದ ಸೀಸನ್‌ನಲ್ಲಿ 150 ರಿಂದ 200 ರೂ.ವರೆಗೆ ಸಿಗುತ್ತದೆ. ದೀಪಾವಳಿ ಹಬ್ಬದ ವೇಳೆ ಕ್ವಿಂಟಾಲ್ ಗಟ್ಟಲೆ ಹೂ ಸಿಕ್ಕಿ ಹೆಚ್ಚು ಲಾಭ ದೊರೆಯಿತು. 15 ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಔಷಧ, ಗೊಬ್ಬರ, ಸಗಣಿ ಗೊಬ್ಬರವನ್ನು ಗಿಡಗಳಿಗೆ ಹಾಕಬೇಕು. ಅದನ್ನು ನನ್ನ ಪತಿ, ಮಗ ನೋಡಿಕೊಳ್ಳುತ್ತಾರೆ. ಕಡಿಮೆ ಹೂ ಇದ್ದಾಗ ನಾವೇ ಮೂವರು ಹೂ ಕೀಳುತ್ತೇವೆ. ಜಾಸ್ತಿ ಇದ್ದಾಗ ಆಳುಗಳನ್ನು ಕರೆಯುತ್ತೇವೆ. ನಾವೇ ಕೆಲಸ ಮಾಡುವುದರಿಂದ ಲಾಭ ಕಾಣುವಂತಾಗಿದೆ. ಈ ವರ್ಷ 1 ಲಕ್ಷ ರೂ. ಖರ್ಚು ಮಾಡಿದ್ದು ಸುಮಾರು 4 ಲಕ್ಷ ರೂ. ಆದಾಯ ಸಿಕ್ಕಿದೆ ಎಂದು ತಮ್ಮಡಿಹಳ್ಳಿಯ ರೈತ ಮಹಿಳೆ ಅನ್ನಪೂರ್ಣಮ್ಮ ಹೇಳಿದ್ದಾರೆ.
ಮೊದಲ 3 ತಿಂಗಳು ಗಿಡವನ್ನು ಚಿವುಟಿ ಹಾಕಿ ಗಿಡವು ಎತ್ತರಕ್ಕೆ ಬೆಳೆಯದಂತೆ ಹರಡಿಕೊಳ್ಳುವಂತೆ ನೋಡಿಕೊಳ್ಳಬೇಕು. ಮಾರ್ಚ್‌ನಿಂದ ನವೆಂಬರ್ ತಿಂಗಳವರೆಗೂ ಹೆಚ್ಚು ಹೂ ಸಿಗಲಿದೆ. ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಚಳಿ ಇರುವುದರಿಂದ ಗಿಡ ಒಣಗಿ ಹೂ ಸಿಗುವುದು ಕಡಿಮೆ ಸಿಗಲಿದೆ. ಇಡೀ ಕುಟುಂಬವೇ ಕೆಲಸ ಮಾಡುವುದರಿಂದ ಕೂಲಿಗಳಿಗೆ ಕೊಡುವಂತಹ ಹಣ ಉಳಿತಾಯವಾಗುತ್ತದೆ. ಹೆಚ್ಚು ಹೂ ದೊರಕುವಾಗ ಕೂಲಿಗಳನ್ನು ಕರೆದುಕೊಂಡು ಹೂ ಕೀಳುತ್ತಿದ್ದು ಕೂಲಿಯಾಳುಗಳಿಗೆ ದಿನಕ್ಕೆ 300 ರೂ.ಕೊಡಬೇಕಾಗುತ್ತದೆ. ಆರಂಭದಲ್ಲಿ ಕಡಿಮೆ ಹೂ ಸಿಗುವಾಗ ಆಯನೂರಿನ ವ್ಯಾಪಾರಿಗಳಿಗೆ ಮಾರುತ್ತಿದ್ದು ಹೂ ಹೆಚ್ಚಾದಂತೆ ಶಿವಮೊಗ್ಗದ ಮಾರುಕಟ್ಟೆಗೆ ಸಾಗಿಸಲಾಗುತ್ತಿದೆ.
ಇದ್ದ ಮೂರೂವರೆ ಎಕರೆ ಜಮೀನಿನಲ್ಲಿ 3 ಬೋರ್‌ವೆಲ್ ಹೊಡಿಸಿ ಸಾಲ ಮಾಡಿಕೊಂಡು ಜೀವನ ಸಾಗಿಸುವುದು ಕಷ್ಟವಾಗಿತ್ತು. ಇಂತಹ ಸಮಯದಲ್ಲಿ ಹೂ ಕೃಷಿ ಮಾಡಿದ್ದು ಅನುಕೂಲವಾಗಿದೆ. ಇದು ನಮ್ಮ ಕುಟುಂಬದ ಆಧಾರ ಸ್ತಂಭವಾಗಿದೆ. ಧರ್ಮಸ್ಥಳ ಸಂಸ್ಥೆಗೆ ನಾವು ಕೃತಜ್ಞರಾಗಿದ್ದೇವೆ ಎಂದು ಅನ್ನಪೂರ್ಣಮ್ಮ ಪತಿ ರಮೇಶ್ ಹೇಳುತ್ತಾರೆ. ಮಾಹಿತಿಗೆ 8861643845 (ಅನ್ನಪೂರ್ಣಮ್ಮ ಪತಿ ರಮೇಶ್) ಸಂಪರ್ಕಿಸಬಹುದು.
ಧರ್ಮಸ್ಥಳ ಸಂಘದಿಂದ ಪ್ರವಾಸ ಕರೆದುಕೊಂಡು ಹೋಗಿದ್ದರು. ಅದರಿಂದ ಪ್ರೇರಿತರಾಗಿ ನಾವು ಮಾಡಬಹುದು ಎನಿಸಿತು. ಭೂಮಿ ಉಳುಮೆ ಮಾಡುವುದು ತಿಳಿದುಕೊಂಡು ಗುಲಾಬಿ ನಾಟಿ ಮಾಡಲಾಯಿತು. ಹೂ ಕೃಷಿ ಮಾಡಿ ನಮ್ಮ ಮಕ್ಕಳ ಶಿಕ್ಷಣಕ್ಕೆ ಹಾಗೂ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ. ನಾವು ಆರ್ಥಿಕವಾಗಿ ಬೆಳೆಯುವಂತಾಯಿತು. ಇದಕ್ಕಾಗಿ ಧರ್ಮಸ್ಥಳ ಸಂಘದಿಂದ 2 ಲಕ್ಷ ರೂ. ಸಾಲ ಪಡೆಯಲಾಗಿತ್ತು. ಈಗ ಅದನ್ನು ತೀರಿಸಿ ಮತ್ತೆ 2 ಲಕ್ಷ ಸಾಲ ಪಡೆಯಲಾಗಿದೆ ಎನ್ನುತ್ತಾರೆ ಅನ್ನಪೂರ್ಣಮ್ಮ.
ಡಾ. ವೀರೇಂದ್ರ ಹೆಗ್ಗಡೆ ಅವರು ಹಳ್ಳಿಗಳಲ್ಲಿನ ಬಡ ರೈತ ಕುಟುಂಬಗಳನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಸ್ವಸಹಾಯ ಸಂಘಗಳು ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಮೂಲಕ ಅವರಲ್ಲಿ ಉಳಿತಾಯ ಮನೋಭಾವ ಬೆಳೆಸಿ ನಂತರ ಆರ್ಥಿಕ ಸಹಕಾರ ನೀಡಲಾಗುವುದು. ಕೃಷಿ ಮತ್ತು ಹೈನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ರೈತರು ತಮ್ಮದೇ ಜಮೀನಿನಲ್ಲಿ ಹೊಸ ಕೃಷಿ ಮಾಡಬೇಕು. ಅದರಿಂದ ಲಾಭ ಗಳಿಸಬೇಕು ಎನ್ನುತ್ತಾರೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ರೂಪಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net