

ನರಗುಂದ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ರಜೆ ಮೇಲೆ ಪಟ್ಟಣಕ್ಕೆ ಬಂದಿದ್ದ ನೌಕಾಪಡೆಯ ಕಮಾಂಡರ್‌ಗೆ ಬುಲಾವ್ ಬಂದಿದ್ದು, ಅವರು ರಜೆ ಮೊಟಕುಗೊಳಿಸಿ ಸೇವೆ ಮರಳಿದ್ದಾರೆ.
ಪಟ್ಟಣದ ವಿದ್ಯಾಗಿರಿ ಬಡಾವಣೆಯ ಬಾಲಾಜಿ ಜಗದೀಶ ಬೆಳವಟಗಿ ಭಾರತೀಯ ನೌಕಾಪಡೆ ಜಲಾಂತರ್ಗಾಮಿ (ಸಬ್ ಮೆರಿನ್)ಗಳಲ್ಲಿ ಆಂಟಿ-ಸಬ್‌ಮರಿನ್ ವಾರ್‌ಫೇರ್(ಲೆಫ್ಟಿನೆಂಟ್ ಕಮಾಂಡರ್) ಅಧಿಕಾರಿಯಾಗಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಕೈಗೊಂಡಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಹಿರಿಯ ಅಧಿಕಾರಿಗಳಿಂದ ತುರ್ತು ಸಂದೇಶ ರವಾನೆಯಾಗಿದ್ದರಿಂದ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಬಾಲಾಜಿ ಅವರು ಶತ್ರು ರಾಷ್ಟ್ರದ ನೌಕೆಗಳು, ಸಬ್‌ಮರಿನ್‌ಗಳನ್ನು ಪತ್ತೆ ಹಚ್ಚಿ ಟಾರ್ಪಿಡೋ ಮತ್ತು ಕ್ಷಿಪಣಿಗಳ ಮೂಲಕ ನಾಶ ಮಾಡುವ ವಿಶೇಷ ಪರಿಣತಿ ಹೊಂದಿದ್ದಾರೆ. ಇದರಿಂದ ಭಾರತದ ಸಾಗರ ಸೀಮೆಗಳನ್ನು ರಕ್ಷಿಸುವುದರ ಜತೆಗೆ ಸಮುದ್ರ ಮಾರ್ಗಗಳ ಮೂಲಕ ನಡೆಯುವ ದೇಶದ ಶೇ.90ರಷ್ಟು ವಿವಿಧ ಸರಕು- ಸಾಗಾಣಿಕೆ, ತೈಲ ರಪ್ತು, ಪ್ರತಿಯೊಂದು ಹಣಕಾಸಿನ ಮಹತ್ವದ ವ್ಯಾಪಾರ ವಿನಿಮಯಕ್ಕೆ ಭದ್ರತೆ ಒದಗಿಸುತ್ತಿದ್ದಾರೆ. ಈಗ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಭಾಗವಾಗಿದ್ದು, ಸಮುದ್ರದ ಒಳಗಿನಿಂದ ಶತ್ರುರಾಷ್ಟ್ರ ಪಾಕಿಸ್ತಾನದ ನೌಕಾ ಪಡೆಗಳ ಎದುರಾಳಿಯಾಗಿ ಭಾರತೀಯ ನೌಕಾಪಡೆ ತಂಡದವರೊಂದಿಗೆ ದಾಳಿ ನಡೆಸುತ್ತಿದ್ದಾರೆ.