ಕಾಂಗ್ರೆಸ್ ನೀಡಿದ 5 ಗ್ಯಾರಂಟಿ ಅನುಷ್ಠಾನ ಖಚಿತ

Lie, Congress, Leader, Minister, Ishwar Khandre, Sarcasm,
Published on

ಚಿತ್ರದುರ್ಗ: ರಾಜ್ಯದ ಜನತೆಗೆ ಕಾಂಗ್ರೆಸ್ ನೀಡಿದ 5 ಗ್ಯಾರಂಟಿ ಅನುಷ್ಠಾನ ಆಗುವುದು ಖಚಿತ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಚಿತ್ರದುರ್ಗ ಮತ್ತು ಸಿರಿಗೆರೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಯೋಜನೆ ಜಾರಿಯಿಂದ ಮುಂದಿನ 25 ವರ್ಷ ನಮ್ಮ ಪಕ್ಷದ ಆಡಳಿತ ನಿಶ್ಚಿತ. ಇದು ಬಿಜೆಪಿಗರಿಗೆ ಅಧಿಕಾರದಿಂದ ದೂರ ಉಳಿಯುವ ಭಯ ಹುಟ್ಟಿಸಿದ್ದು, ಹತಾಶರಾಗಿದ್ದಾರೆ.

ಹೀಗಾಗಿ ತಮ್ಮ ಮನೆ ದೇವರು ಸುಳ್ಳನ್ನು ಪದೇ ಪದೆ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಗ್ಯಾರಂಟಿ ಕುರಿತು ಬಿಜೆಪಿ ನಾಯಕರು ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಸಚಿವರು, ಜೂ. 1ರಂದು ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಅಂದಿನಿಂದಲೇ ಜಾರಿಗೆ ಬರಲಿದೆ ಎಂದರು.

ಜನಾಶೀರ್ವಾದದಿಂದ ಪಕ್ಷಕ್ಕೆ ಅಧಿಕಾರ ಬಂದಿದೆ. ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿನಂತೆಯೇ ನಡೆಯಲಿದ್ದಾರೆ. ಜನಪರ, ಭ್ರಷ್ಟಾಚಾರರಹಿತ ಆಡಳಿತ ನೀಡಲಿದ್ದೇವೆ.

ಅನುಮಾನ ಪಡುವ ಅಗತ್ಯ ಉದ್ಭವಿಸದು

ಈ ಹಿಂದೆ ಕೂಡ ಹೇಳಿದ್ದನ್ನು ಕಾಂಗ್ರೆಸ್ ಮಾಡಿದೆ. ಮುಂದೆಯೂ ಮಾಡಲಿದೆ. ಅನುಮಾನ ಪಡುವ ಅಗತ್ಯ ಉದ್ಭವಿಸದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿ ನಾಯಕರಿಗೆ ಮಾಡಲು ಯಾವುದೇ ಕೆಲಸವಿಲ್ಲ. ಅತ್ಯಂತ ಹೀನಾಯವಾಗಿ ಸೋಲುಂಡಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಅವರು 2014ರಲ್ಲಿ ವಿದೇಶದಲ್ಲಿರುವ ಕಪ್ಪು ಹಣ ತರುವ, ಜನರ ಖಾತೆಗೆ 15 ಲಕ್ಷ ರೂ. ಜಮಾ ಮಾಡುವ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಪೈಕಿ ಯಾವುದಾದರೂ ಒಂದು ಭರವಸೆ ಈಡೇರಿಸಿದ್ದಾರಾ ಎಂದು ಪ್ರಶ್ನಿಸಿದರು.

ಉತ್ತಮ ಆಡಳಿತ ನೀಡಲಿದ್ದೇವೆ

ನಾವು ಸಂವಿಧಾನದ ಆಶೋತ್ತರಗಳಿಗೆ ಬದ್ಧರಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಆಡಳಿತ ನೀಡಲಿದ್ದೇವೆ. ಯಾರು ಧಾರ್ಮಿಕ ಭಾವನೆ ಕೆರಳಿಸುವ ಕೆಲಸ ಮಾಡಬಾರದು.

ಒಂದು ಸಮುದಾಯವನ್ನು ಗುರಿಯಾಗಿಸಿ ಪ್ರಚೋದಿಸೋದು ಸರಿಯಲ್ಲ. ಧರ್ಮ ಸಂಘರ್ಷ ನಡೆಯೋದಕ್ಕೆ ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ಬಜರಂಗದಳ ನಿಷೇಧ ಕುರಿತ ಪ್ರಶ್ನೆಗೆ ಖಂಡ್ರೆ ಪ್ರತಿಕ್ರಿಯಿಸಿದರು.

ಐದು ವರ್ಷವೂ ಸಿದ್ದರಾಮಯ್ಯ ಸಿಎಂ ಆಗಿ ಇರೋದು ಗ್ಯಾರಂಟಿನಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇದು ಅಪ್ರಸ್ತುತವೆಂದು ಪ್ರತಿಕ್ರಿಯಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲೂ ಜನ ಅಭೂತಪೂರ್ವ ಬೆಂಬಲ ಪಕ್ಷಕ್ಕೆ ನೀಡಿದ್ದಾರೆ. ರಾಜ್ಯದೆಲ್ಲೆಡೆ ಸಂಚರಿಸಿ ಪಕ್ಷ ಸಂಘಟನೆಗೆ ಇನ್ನಷ್ಟು ಒತ್ತು ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net