25 ಕೋಟಿ ರೂ. ವೆಚ್ಚದಲ್ಲಿ ಲಿಡ್ಕರ್ ಸಂಶೋಧನಾ ಕೇಂದ್ರ: ಸಚಿವ ಶ್ರೀರಾಮುಲು ಹೇಳಿಕೆ

CTD 13DS HALLI
Published on

ಚಿತ್ರದುರ್ಗ: ನಗರದಲ್ಲಿ 25 ಕೋಟಿ ರೂ.ವೆಚ್ಚದಲ್ಲಿ ಚರ್ಮೋದ್ಯಮ ಸಂಶೋಧನೆ, ತರಬೇತಿ ಹಾಗೂ ಉತ್ಪಾದನಾ ಕೇಂದ್ರ ಸ್ಥಾಪಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ತಾಲೂಕಿನ ಡಿಎಸ್‌ಹಳ್ಳಿಯಲ್ಲಿ ಶನಿವಾರ ಡಾ.ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ಚರ್ಮ ಶಿಲ್ಪಿ ಭವನದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ದುರ್ಗದಲ್ಲಿ ಸಂಶೋಧನಾ ಕೇಂದ್ರದ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಸೂಕ್ಷ್ಮಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ 20 ಕೋಟಿ ರೂ., ರಾಜ್ಯ ಸರ್ಕಾರ 5 ಕೋಟಿ ರೂ. ಘೋಷಿಸಿವೆ ಎಂದರು.

ಸರ್ಕಾರ ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವುದಾಗಿ ಹೇಳಿದೆ. ಆದರೆ ಸರ್ಕಾರಿ ಮೆಡಿಕಲ್ ಕಾಲೇಜನ್ನೇ ಸ್ಥಾಪಿಸುವಂತೆ ಕೋರಿ ಮತ್ತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡುವುದಾಗಿ ಸಚಿವರು ಹೇಳಿದರು.

ನಿಗಮದ ಅಧ್ಯಕ್ಷ ಹಾಗೂ ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ತಮ್ಮ ಹುಟ್ಟೂರು ಡಿಎಸ್‌ಹಳ್ಳಿಯಲ್ಲಿ ಒಂದು ಕೋಟಿ ರೂ. ವೆಚ್ಚ ದಲ್ಲಿ 71.83 ಚದರಡಿ ವಿಸ್ತೀರ್ಣ ಚರ್ಮಶಿಲ್ಪಿ ಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಜಿಲ್ಲೆಯ ವಿವಿಧೆಡೆಯೂ ಈ ಭವನಗಳಿಗೆ ಬೇಡಿಕೆ ಇದೆ ಎಂದರು.

ಸಂಸದ ಎ.ನಾರಾಯಣಸ್ವಾಮಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಪ್ರಕಾಶ್, ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನರಸಿಂಹರಾಜು, ಸಿಇಒ ಡಾ.ಕೆ.ನಂದಿನಿದೇವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net