

ತುಮಕೂರು: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಆತಂಕದ ನಡುವೆಯೇ ಆರಂಭವಾದ ಮದ್ಯ ಮಾರಾಟ ಜಿಲ್ಲೆಯೆಲ್ಲ್ಲೆಡೆ ಏಕಕಾಲದಲ್ಲಿ ಆರಂಭವಾಗದೆ ಮದ್ಯಪ್ರಿಯರ ಹಾರ್ಟ್‌ಬೀಟ್ ಹೆಚ್ಚಿಸಿತ್ತು.!
ನಗರ ಹೊರತುಪಡಿಸಿ ಚಿಕ್ಕನಾಯಕನಹಳ್ಳಿ, ಪಾವಗಡ ಸೇರಿ ವಿವಿಧ ಕಡೆಗಳಲ್ಲಿ ಮಂಗಳವಾರ ಸಂಜೆಯಾದರೂ ಕೆಲ ಮದ್ಯಂಗಡಿಗಳ ಬಾಗಿಲು ತೆರೆಯದೇ ಇದ್ದದ್ದು ಮದ್ಯಪ್ರಿಯರನ್ನು ಜಿಲ್ಲೆ ‘ಗಡಿ’ದಾಟುವಂತೆ ಪ್ರೇರೇಪಿಸಿತ್ತು.
ಲಾಕ್‌ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದ್ದರೂ ದುಪ್ಪಟ್ಟು ಹಣಕ್ಕೆ ಮದ್ಯ ಸಿಕ್ಕಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ, ಮದ್ಯದಂಗಡಿ ತೆರೆಯುವ ಸಂದರ್ಭದಲ್ಲಿ ಅಷ್ಟೇ ಮಾಲು ಅಂಗಡಿಯಲ್ಲಿರಬೇಕೆಂಬ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚನೆಗೆ ಮದ್ಯ ಮಾರಾಟಗಾರರು ಬೆವೆತುಹೋಗಿದ್ದಾರೆ. ಕೊನೆಗೆ ಜಿಲ್ಲಾಡಳಿತ ಮದ್ಯದಂಗಡಿಗಳಲ್ಲಿ ಅಬಕಾರಿ, ಕಂದಾಯ ಹಾಗೂ ಪೊಲೀಸ್ ಇಲಾಖೆಗಳ ಮೂಲಕ ಪ್ರತ್ಯೇಕವಾಗಿ ಎಣಿಕೆ ನಡೆಸಿ ದಾಸ್ತಾನು ಸರಿಯಿದ್ದರಷ್ಟೇ ಅಂಗಡಿ ತೆರೆಯಲು ಅನುಮತಿ ನೀಡಿದೆ.
ಈ ಪ್ರಕ್ರಿಯೆ ದೀರ್ಘವಾಗಿದ್ದ ಹಿನ್ನೆಲೆಯಲ್ಲಿ ಅಂಗಡಿ ತೆರೆಯುವುದು ತಡವಾಗಿದ್ದರಿಂದ ಮದ್ಯಪ್ರಿಯರು ಚಡಪಡಿಸಿದ್ದಲ್ಲದೆ ಬಾರ್ಡರ್ ಕ್ರಾಸ್ ಮಾಡಿ ಬೇರೆ ಜಿಲ್ಲೆಗಳಿಗೆ ಹೋಗಿ ಖರೀದಿಸಿದ್ದಾರೆ.
ಜಿಲ್ಲೆಯಲ್ಲಿ ಮದ್ಯಮಾರಾಟ ತಡವಾಗುವುದು ಖಚಿತವಾದೊಡನೆ ಮದ್ಯಪ್ರಿಯರು ವಾಮಮಾರ್ಗ ಹುಡುಕಿಕೊಂಡು ಮದ್ಯ ಪಡೆದು ಖುಷಿಪಟ್ಟರು. ಚಿತ್ರದುರ್ಗ ಜಿಲ್ಲೆಯ ಶ್ರೀರಾಂಪುರ, ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿ, ಹಾಸನ ಜಿಲ್ಲೆಯ ಡಿ.ಎಂ.ಕುರ್ಕೆ, ರಾಂಪುರ ಮತ್ತಿತರರ ಗ್ರಾಮಗಳಿಗೆ ತೆರಳಿದ ಚಿಕ್ಕನಾಯಕನಹಳ್ಳಿ, ತಿಪಟೂರು ಹಾಗೂ ಶಿರಾ, ಗುಬ್ಬಿಯ ಕೆಲವರು ಮದ್ಯ ಕೊಂಡುಕೊಂಡು ಬಂದು ನಶೆಯ ಅಮಲಿನಲ್ಲಿ ತೇಲಿದರು.
ತುಮಕೂರಿಗರು ನೆರೆಯ ಕೋರಾ, ಕೆಸ್ತೂರು, ತೋವಿನಕೆರೆ, ಕೊರಟಗೆರೆ, ಹೆಬ್ಬೂರು, ಊರ್ಡಿಗೆರೆ, ಹೀರೇಹಳ್ಳಿ ಅಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆ, ತ್ಯಾಮಗೊಂಡ್ಲುವರೆಗೆ ‘ದಂಡಯಾತ್ರೆ’ ನಡೆಸಿ ಮದ್ಯ ಸಿಗುತ್ತಿದ್ದಂತೆ ಯುದ್ಧ ಗೆದ್ದವರಂತೆ ಸಂಭ್ರಮಿಸಿದ್ದವರಿಗೇನು ಕಡಿಮೆ ಇಲ್ಲ.
ಮದ್ಯ ಮಾರಾಟ ನಿಂತಿಲ್ಲ!
ಜಿಲ್ಲೆಯಲ್ಲಿ ಲಾಕ್‌ಡೌನ್ ಸಮಯದಲ್ಲಿಯೂ ಮದ್ಯ ಸಿಕ್ಕಿದೆ. ಹತ್ತು ಪಟ್ಟು ಹೆಚ್ಚು ದರ ನೀಡಿದರೆ ಹಳ್ಳಿ, ಹಳ್ಳಿಗಳಲ್ಲಿ ಮದ್ಯ ಸಲೀಸಾಗಿ ಸಿಕ್ಕುತ್ತಿದ್ದುದು ಗುಟ್ಟಾಗಿ ಉಳಿದಿಲ್ಲ. ಮದ್ಯ ಮಾರಾಟಗಾರರು ಸೀಲ್ ಲೆಕ್ಕಿಸದೆ ತಮ್ಮಲ್ಲಿದ್ದ ಮದ್ಯವನ್ನು ಹತ್ತುಪಟ್ಟು ದುಬಾರಿ ಬೆಲೆಗೆ ಮಾರಾಟ ಮಾಡಿದ್ದು ಜಿಲ್ಲೆಯಲ್ಲಿ 7 ಮದ್ಯದಂಗಡಿಗಳ ಪರವಾನಗಿ ಅಮಾನತು ಕೂಡ ಮಾಡಲಾಗಿದೆ.
ಕಾಡಿದ ಕರೊನಾ ಭೀತಿ!: ನೆರೆಯ ಆಂಧ್ರದಲ್ಲಿ ಮದ್ಯ ಮಾರಾಟ ಸ್ಥಗಿತವಾಗಿರುವುದರಿಂದ ಅಲ್ಲಿನವರು ಪಾವಗಡ ತಾಲೂಕಿನ ಅರಸೀಕೆರೆ, ಲಿಂಗದಹಳ್ಳಿ, ಅಮರಾಪುರ ಹಾಗೂ ಮಡಕಶಿರಾ ಭಾಗದಿಂದ ಪಾವಗಡ, ಮಧುಗಿರಿ, ಶಿರಾ ತಾಲೂಕುಗಳ ಮದ್ಯದಂಗಡಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ಹೊರ ರಾಜ್ಯ, ಹೊರ ಜಿಲ್ಲೆಯ ಗಡಿಯನ್ನೂ ಲೆಕ್ಕಿಸದೇ ಜನರು ಮದ್ಯವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಿದರೂ ಯಾವ ಚೆಕ್‌ಪೋಸ್ಟ್‌ಗಳು ಅಡ್ಡಿಯಾಗಲಿಲ್ಲ.
ಜಿಲ್ಲೆಯಲ್ಲಿ ಶೇ.50 ರಷ್ಟು ಮದ್ಯದಂಗಡಿಗಳು ತೆರೆದಿದ್ದು, ಮೊದಲ ದಿನ 100 ಮದ್ಯದಂಗಡಿಗಳಲ್ಲಿ ಮಾರಾಟಕ್ಕೆ ಅವಕಾಶವಾಗಿದೆ. ಒಂದೆ ದಿನ 29,487.468 ಲೀಟರ್ ಮದ್ಯ ಹಾಗೂ 4196.920 ಲೀಟರ್ ಬಿಯರ್ ಮಾರಾಟವಾಗಿದೆ. ಎಸ್.ನಾಗರಾಜಪ್ಪ ಉಪ ಆಯುಕ್ತಜಿಲ್ಲಾ ಅಬಕಾರಿ ಇಲಾಖೆ