ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡಿದರೆ ಲೈಸನ್ಸ್ ರದ್ದು

ganapathi
ಚಿಕ್ಕಮಗಳೂರು ಜಿಲ್ಲಾಡಳಿತ ಸಭಾಂಗಣದಲ್ಲಿ ಗಣೇಶ ಚತುರ್ಥಿ ಆಚರಣೆ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿದರು. ಡಾ. ಬಿ.ಗೋಪಾಲಕೃಷ್ಣ, ರಾಧಾ, ಕೃಷ್ಣಮೂರ್ತಿ ಇತರರಿದ್ದರು.
Published on

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬಾರದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗಣೇಶ ಚತುರ್ಥಿಯನ್ನು ಶಾಂತಿ, ಸೌಹಾರ್ದಯುತವಾಗಿ ಆಚರಿಸುವ ಮೂಲಕ ಸಾರ್ವಜನಿಕರು ಸಹಕರಿಸಬೇಕು. ಹಬ್ಬ ಆಚರಣೆಗೆ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಅದರ ಪ್ರಕಾರ ಹಬ್ಬ ಆಚರಿಸಬೇಕು. ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಿಒಪಿ ಗಣೇಶಮೂರ್ತಿ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಗಣೇಶ ಮೂರ್ತಿಗಳ ಮಾರಾಟ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡುವುದು ಕಂಡುಬಂದರೆ ಮಾರಾಟಗಾರರ ವಿರುದ್ಧ ಕ್ರಮ ಕೈಗೊಂಡು ಅವರ ಪರವಾನಗಿ ರದ್ದುಗೊಳಿಸಬೇಕು ಎಂದು ಸೂಚಿಸಿದರು.
ಬೇರೆ ಜಿಲ್ಲೆಗಳಿಂದ ಪಿಒಪಿ ವಿಗ್ರಹಗಳನ್ನು ತರುವುದನ್ನು ತಡೆಗಟ್ಟಲು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಬೇಕು. ಪಿಒಪಿ ಮತ್ತು ರಾಸಾಯನಿಕ ಬಣ್ಣದ ವಿಗ್ರಹಗಳನ್ನು ತಯಾರಿಸಬಾರದು. ಯಾವುದೇ ಜಲಮೂಲಗಳಲ್ಲಿ ಅಂತಹ ವಿಗ್ರಹಗಳು ವಿಸರ್ಜನೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ಇತರರಿಗೆ ನೋವಾಗದ ರೀತಿಯಲ್ಲಿ ಡಿಜೆ ಧ್ವನಿವರ್ಧಕಗಳನ್ನು ಬಳಸದೆ ಭಕ್ತಿಭಾವದಿಂದ ಆಚರಿಸಬೇಕು. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸಬಾರದು. ಪ್ರತಿಷ್ಠಾಪನೆ ಮಾಡುವ ಸಮಿತಿಗಳು ಸಾರ್ವಜನಿಕರಿಂದ ಒತ್ತಾಯಪೂರ್ವಕವಾಗಿ ವಂತಿಗೆ, ದೇಣಿಗೆ ರೂಪದಲ್ಲಿ ಹಣ ಪಡೆಯಬಾರದು. ಗಣೇಶ ವಿಸರ್ಜನೆ ದಿನದಂದು ಸಂಚಾರ ವ್ಯವಸ್ಥೆಗೆ ಅಡೆತಡೆಯಾಗದಂತೆ ಮೆರವಣಿಗೆ ಮಾಡಲು ಸೂಚಿಸಬೇಕು ಎಂದು ತಿಳಿಸಿದರು.
ಪ್ರತಿವರ್ಷ ದಂಟರಮಕ್ಕಿ ಕೆರೆಯಲ್ಲಿ ನಿರ್ಮಾಣ ಮಾಡಲಾಗಿದ್ದ ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗುತ್ತಿತ್ತು, ಕೆರೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಕಾಮಗಾರಿಯನ್ನು ನಡೆಸುತ್ತಿರುವುದರಿಂದ ಹಿರೇಮಗಳೂರು ಸಮೀಪದ ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ.
ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಗೋಪಾಲಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಪರಿಸರಾಧಿಕಾರಿ ರಾಧ ಮತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net