ಹಣ್ಣು, ತರಕಾರಿ ಸಾಗಾಟಕ್ಕೆ ಲೈಸೆನ್ಸ್, ರೈತರ ಸಮಸ್ಯೆಗೆ ಜಿಲ್ಲಾಡಳಿತ ಸ್ಪಂದನೆ

ananas
Published on

ಉಡುಪಿ: ಜಿಲ್ಲೆಯ ಅನೇಕ ರೈತರು ಮಟ್ಟುಗುಳ್ಳ, ಕಲ್ಲಂಗಡಿ, ಅನಾನಸು ಮುಂತಾದ ತೊಟಗಾರಿಕಾ ಬೆಳೆ, ಹಣ್ಣು ಮತ್ತು ತರಕಾರಿಗಳನ್ನು ಮಾರುಕಟ್ಟೆಗೆ ಕಳುಹಿಸಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿರುವುದನ್ನು ಗಮನಿಸಿದ ಜಿಲ್ಲಾಡಳಿತ, ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳ ಮಾರುಕಟ್ಟೆಗೆ ಸಾಗಾಟ ಮಾಡಲು ಅನುವಾಗುವಂತೆ 7 ವಾಹನಗಳಿಗೆ ಅನುಮತಿ ಪತ್ರ ನೀಡಿದೆ.

ಜಿಲ್ಲೆಯಲ್ಲಿ ಪ್ರಸಕ್ತ 25 ಹೆಕ್ಟೇರ್ ಪ್ರದೇಶದಲ್ಲಿ 1000 ಮೆ.ಟನ್ ಕಲ್ಲಂಗಡಿ ಮತ್ತು 150 ಹೆಕ್ಟೇರ್ ಪ್ರದೇಶದಲ್ಲಿ 9732 ಮೆ.ಟನ್ ಅನಾನಸು ಬೆಳೆಯಲಾಗಿದ್ದು, ಇವು ಮಾರುಕಟ್ಟೆಗೆ ತಲುಪುತ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ತೋಟಗಾರಿಕೆ ಇಲಾಖೆ ಮೂಲಕ 6 ಮೆ.ಟನ್ ಮಟ್ಟುಗುಳ್ಳ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ, 82 ಮೆ.ಟನ್ ಕಲ್ಲಂಗಡಿಯನ್ನು ಮಂಗಳೂರು, ಉತ್ತರ ಕನ್ನಡ, ಧಾರವಾಡ ಜಿಲ್ಲೆಗೆ, 13 ಮೆ.ಟನ್ ಅನಾನಸನ್ನು ಶಿವಮೊಗ್ಗ, ದಕ್ಷಿಣಕನ್ನಡ ಜಿಲ್ಲೆಗೆ, 20 ಮೆ.ಟನ್ ಬಾಳೆಹಣ್ಣನ್ನು ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗೆ ಹಾಗೂ 10 ಮೆ.ಟನ್ ಪಪ್ಪಾಯ ಹಣ್ಣನ್ನು ಉತ್ತರ ಕನ್ನಡ ಜಿಲ್ಲೆಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಂಡಿದೆ.

ಲಾಕ್ ಡೌನ್‌ನಿಂದ ವಿನಾಯತಿ: ಎಲ್ಲ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ರೈತರು ತಾವು ಬೆಳೆದ ತೋಟಗಾರಿಕೆ ಉತ್ಪನ್ನಗಳಾದ ಹಣ್ಣು ಮತ್ತು ತರಕಾರಿಗಳನ್ನು ಸರಬರಾಜು ಮಾಡಲು ಲಾಕ್‌ಡೌನ್ ಆದೇಶದಿಂದ ವಿನಾಯಿತಿ ನೀಡಲಾಗಿದೆ. ಹೀಗಾಗಿ ಬೆಳೆಗಾರರು ತಾವು ಬೆಳೆದ, ದಾಸ್ತಾನು ಮಾಡಿಕೊಂಡಿರುವ ಹಣ್ಣು ಮತ್ತು ತರಕಾರಿಗಳನ್ನು ಆಯಾ ಮಾರುಕಟ್ಟೆಗೆ ಹೊರ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೆ ಸಾಗಿಸಲು ಅನುಮತಿ ನೀಡಲಾಗಿದೆ. ಬೆಳೆಗಾರರು ಕೂಲಿಕಾರರಿಗೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಒದಗಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ವ್ಯವಹಾರ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದೆ.

ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಣ್ಣುಗಳ ಸಗಟು ವ್ಯಾಪಾರಸ್ಥರ ಸಭೆ ಕರೆಯ ಲಾಗಿದ್ದು, ಜಿಲ್ಲೆಯ ವಿವಿಧ ರೈತರಿಂದ 35.00 ಮೆ.ಟನ್ ಅನಾನಸು, 5 ಸಾವಿರ ಗೊನೆಬಾಳೆ, 55 ಮೆ.ಟನ್ ಕಲ್ಲಂಗಡಿಯನ್ನು ಮುಂದಿನ ಎರಡು ದಿನಗಳಲ್ಲಿ ಖರೀದಿಸಿ, ಮಾರಾಟ ಮಾಡಲು ಸೂಚನೆ ನೀಡಲಾಗಿದೆ.

- ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

ಉಡುಪಿಯಲ್ಲಿ ಬೇಡಿಕೆ ಕಡಿಮೆ, ಕೇರಳ ಸಾಗಾಟಕ್ಕೆ ಅಡ್ಡಿ

ಕರ್ಜೆ ಸಮೀಪದ ಕುಕ್ಕುಂಜೆಬೈಲಿನಲ್ಲಿ 35 ಎಕರೆ ಪ್ರದೇಶದಲ್ಲಿ ಅನನಾಸು ಬೆಳೆಯಲಾಗಿದ್ದು, ಕಟಾವಿಗೆ ಸಿದ್ಧವಾದ 100 ಟನ್ ಅನನಾಸು ಕೊಳ್ಳುವವರಿಲ್ಲದೆ ರೈತರಿಗೆ ಸಂಕಷ್ಟ ಎದುರಾಗಿದೆ. ಉಡುಪಿ ಜಿಲ್ಲೆಯಲ್ಲಿ ಅನಾನಸಿಗೆ ಬೇಡಿಕೆ ಕಡಿಮೆ. ಹೀಗಾಗಿ ಇಲ್ಲಿನ ಬೆಳೆಗಾರರು ಹೊರ ರಾಜ್ಯಗಳ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ. ಅಜೆಕಾರು, ಬಜಗೋಳಿ, ಹೆಬ್ರಿ, ದೊಡ್ಡರಂಗಡಿ ಮೊದಲಾದ ಭಾಗಗಳಲ್ಲಿ 25 ರಿಂದ 30 ಮಂದಿ ಬೆಳೆಗಾರರು ನೂರಾರು ಎಕರೆ ಪ್ರದೇಶದಲ್ಲಿ ಅನಾನಸು ಬೆಳೆಯಲಾಗಿದೆ. ಇವರು ಪ್ರಮುಖವಾಗಿ ಕೇರಳ ಮಾರುಕಟ್ಟೆಗೆ ಬೆಳೆಗಳನ್ನು ಸಾಗಾಟ ಮಾಡುತ್ತಿದ್ದರು. ಕರೊನಾ ಭೀತಿ ಹಿನ್ನೆಲೆಯಲ್ಲಿ ಕೇರಳಕ್ಕೆ ಹೋಗುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿದ್ದರಿಂದ ಇವರು ಅನ್ಯರಾಜ್ಯಗಳತ್ತ ಮುಖಮಾಡುವ ಅನಿವಾರ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net