

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಈ ಬಾರಿ ಜಿಲ್ಲೆಯಲ್ಲಿ ಪಟಾಕಿ ಮಾರಾಟಕ್ಕೆ ಹಲವು ಕಟ್ಟುನಿಟ್ಟಿನ ನಿಬಂಧನೆ ಜಾರಿಮಾಡಿರುವ ಜಿಲ್ಲಾಡಳಿತ, ಪಟಾಕಿ ಮಳಿಗೆ ತೆರೆಯಲು ತಾಲೂಕುಮಟ್ಟದಲ್ಲಿ ರಚಿಸಿರುವ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂಬ ನಿಯಮ ವಿಧಿಸಿದ್ದು, ಆ ಎಲ್ಲ ನಿಯಮಗಳನ್ನು ಪಾಲಿಸಿದರಷ್ಟೇ ಪಟಾಕಿ ಮಾರಾಟಕ್ಕೆ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದೆ.
ಅತ್ತಿಬೆಲೆ ಪಟಾಕಿ ದುರಂತದ ಬಳಿಕ ಎಚ್ಚೆತ್ತಿರುವ ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರೂಪಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನಿಗಾವಹಿಸಲು ಆಯಾ ಭಾಗದ ಅಧಿಕಾರಿಗಳಿಗೆ ಸೂಚಿಸಿದೆ. ದೀಪಾವಳಿ ಹಬ್ಬಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಎಲ್ಲೆಲ್ಲಿ ಪಟಾಕಿ ಮಾರಾಟ ಮಾಡಲು ಅನುಮತಿ ನೀಡಬೇಕು, ಯಾವ ನಿಯಮ ಪಾಲಿಸಬೇಕು ಎಂಬ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿದ್ದು, ತಾಲೂಕುಮಟ್ಟದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ತಂಡ ರಚಿಸಿ ಪಟಾಕಿ ಮಾರಾಟದ ಬಗ್ಗೆ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.
ಪಟಾಕಿ ಮಾರಾಟ ಮಾಡುವ ವ್ಯಾಪಾರಿಗಳು ತಾತ್ಕಾಲಿಕ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಪರವಾನಗಿ ಪಡೆಯಬೇಕಾದರೆ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಬೇಕು, ಅಗತ್ಯ ದಾಖಲೆಗಳೊಂದಿಗೆ ತಹಸೀಲ್ದಾರ್ ನೇತೃತ್ವದಲ್ಲಿ ವರದಿ ಸಲ್ಲಿಸಲು ಸಮಿತಿ ರಚನೆ ಮಾಡಲಾಗಿದೆ.
ಈ ಹಿಂದಿನಂತೆ ಎಲ್ಲೆಂದರಲ್ಲಿ ಪಟಾಕಿ ಮಾರಾಟ ಮಾಡುವುದಕ್ಕೆ ಬ್ರೇಕ್ ಹಾಕಿದ್ದು, ಅಯಾ ತಾಲೂಕು ವ್ಯಾಪ್ತಿಯಲ್ಲಿ ನಿಗದಿಪಡಿಸಿರುವ ಜಾಗಗಳಲ್ಲಿ ಹಸಿರು ಪಟಾಕಿಗಳನ್ನಷ್ಟೇ ಮಾರಾಟ ಮಾಡಬೇಕು ಎಂದು ತಾಕೀತು ಮಾಡಿದೆ. ಪ್ರಮುಖವಾಗಿ ತೆರೆದ ಸರ್ಕಾರಿ ಆಟದ ಮೈದಾನಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ, ಮನೆಗಳ ಹತ್ತಿರ ಹಾಗೂ ಜನಸಂದಣಿ ಇರುವ ಕಡೆಗಳಲ್ಲಿ ಮಾರಾಟಕ್ಕೆ ಅವಕಾಶವಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮದ ಹೊರಗಡೆ ಖಾಸಗಿ ಜಾಗದಲ್ಲಿ ಮಾಲೀಕರು ಒಪ್ಪಿಗೆ ನೀಡಿದರೆ ಮಾತ್ರ ಆ ಜಾಗದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮಿತಿ ರಚನೆ: ಈಗಾಗಲೇ ಜಿಲ್ಲಾಡಳಿತ ಪಟಾಕಿ ಮಾರಾಟಕ್ಕೆ ತಾಲೂಕು ಮಟ್ಟದಲ್ಲಿ ಸೂಕ್ತ ಜಾಗಗಳನ್ನು ಗುರುತಿಸಿ ಪರವಾನಗಿ ನೀಡಲು 5 ಸಮಿತಿ ರಚಿಸಿದೆ. ಆ ಸಮಿತಿಗಳಲ್ಲಿ ಆಯಾ ತಾಲೂಕು ತಹಸೀಲ್ದಾರ್, ಆರಕ್ಷಕ ನಿರೀಕ್ಷಕರು, ತಾಪಂ ಇಒ, ಪೌರಾಯುಕ್ತರು, ಅಗ್ನಿಶಾಮಕ ಅಧಿಕಾರಿ, ಬೆಸ್ಕಾಂ ಅಧಿಕಾರಿ, ಪರಿಸರ ಅಧಿಕಾರಿಗಳಿದ್ದು ಜಂಟಿಯಾಗಿ ಪರಿಶೀಲಿಸಿದ ನಂತರವೇ ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಗಿ ಸಿಗಲಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಪರಿಸರಸ್ನೇಹಿಯಾಗಿ ದೀಪಾವಳಿ ಆಚರಿಸಬೇಕು, ಬೆಳಕಿನ ಹಬ್ಬ ಸಂಭ್ರಮ ತರಬೇಕೇ ಹೊರತು ಅನಾಹುತಗಳಿಗೆ ಆಹ್ವಾನ ನೀಡುವಂತಿರಬಾರದು, ಈ ಹಿನ್ನೆಲೆಯಲ್ಲಿ ಪಟಾಕಿ ಮಾರಾಟಕ್ಕೆ ಕೆಲವೊಂದು ನಿಬಂಧನೆ ವಿಧಿಸಲಾಗಿದೆ. ಅಧಿಕಾರಿಗಳು ಇವುಗಳ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ. ನಿಯಮ ಮೀರಿದರೆ ಶಿಸ್ತು ಕ್ರಮ ಜರುಗಿಸಲಾಗುವುದು.
ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ
ಪರವಾನಗಿ ಪಡೆದ ಪಟಾಕಿ ಗೋದಾಮುಗಳನ್ನು ಪರಿಶೀಲಿಸಲಾಗುತ್ತದೆ, ಹಸಿರು ಪಟಾಕಿ ಇಲ್ಲದ ಹಾಗೂ ನಿಷೇಧಿತ ಪಟಾಕಿ ದಾಸ್ತಾನು ಕಂಡುಬಂದಲ್ಲಿ ಇಡೀ ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜತೆಗೆ ಸಂಬಂಧಿತ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈಗಾಗಲೇ ಹಲವು ಸಭೆ ನಡೆಸಲಾಗಿದ್ದು ನಿಯಮಗಳ ಪಾಲನೆಗೆ ನಿಗಾವಹಿಸಲಾಗಿದೆ.
ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ