ಎಲ್‌ಐಸಿ ಪ್ರತಿನಿಧಿಗಳ ಹೋರಾಟ ಯಶಸ್ವಿ: ವಿಜಯೋತ್ಸವ

MDK04
Published on

ಮಡಿಕೇರಿ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಮೂರು ತಿಂಗಳ ಕಾಲ ನಡೆದ ಹೋರಾಟದಲ್ಲಿ ಶೇ.೭೫ ರಷ್ಟು ಬೇಡಿಕೆಗಳು ಈಡೇರಿದ ಹಿನ್ನೆಲೆಯಲ್ಲಿ ಮಡಿಕೇರಿ ಎಲ್‌ಐಸಿ ಪ್ರತಿನಿಧಿಗಳ ಒಕ್ಕೂಟದಿಂದ ಮಡಿಕೇರಿಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ವಿಜಯೋತ್ಸವ ನಡೆಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಲ್‌ಐಸಿ ಮಡಿಕೇರಿ ಘಟಕದ ಮ್ಯಾನೇಜರ್ ದೀಪಕ್ ಕುಮಾರ್ ಸುರಾನ ಮಾತನಾಡಿ, ೩ ಕೋಟಿ ೭೫ ಲಕ್ಷ ರೂಪಾಯಿಗಳ ವ್ಯವಹಾರದ ನಮ್ಮ ಟಾರ್ಗೆಟನ್ನು ಮೂರು ತಿಂಗಳಲ್ಲಿ ಮುಗಿಸಬೇಕಾಗಿದೆ. ಅದಕ್ಕಾಗಿ ಎಲ್ಲಾ ಪ್ರತಿನಿಧಿಗಳು ಉತ್ಸಾಹಿಗಳಾಗಿ ಕೆಲಸ ಮಾಡಬೇಕಾಗಿದೆ ಎಂದರು.


ಲಿಯಾಫಿ ಅಧ್ಯಕ್ಷ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಎಲ್ಲಾ ಪ್ರತಿನಿಧಿಗಳು ಮೂರು ತಿಂಗಳ ಕಾಲ ನಡೆದ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಪ್ರತಿಫಲವಾಗಿ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಯಿತು. ಇದು ಎಲ್ಲಾ ಪ್ರತಿನಿಧಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.


ಹಿರಿಯ ಅಭಿವೃದ್ಧಿ ಅಧಿಕಾರಿ ನಟರಾಜ್ ಮಾತನಾಡಿ, ಹೋರಾಟದ ವಿಜಯೋತ್ಸವ ಆಚರಿಸುತ್ತಿರುವುದು ಖುಷಿಯ ವಿಚಾರ. ಹೋರಾಟ ಮಾಡಿಯೇ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿರಬೇಕಾದ ಈ ಸಂದರ್ಭದಲ್ಲಿ ಲಿಯಾಫಿ ಸಂಘಟನೆ ಮೂಲಕ ಯಶಸ್ಲಿ ಹೋರಾಟ ಮಾಡಿ ತಮ್ಮ ಬಹುತೇಕ ಸೌಲಭ್ಯಗಳನ್ನು ಪಡೆಯುತ್ತಿದ್ದೀರಿ. ಅದೇ ರೀತಿ ನಿಮ್ಮ ವ್ಯವಹಾರಗಳನ್ನು ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದ ಅವರು, ಇಂದು ತಂತ್ರಜ್ಞಾನ ಬೆಳೆಯುತ್ತಿದ್ದು ಎಲ್‌ಐಸಿ ಕೂಡ ಅದನ್ನು ಅಳವಡಿಸಿಕೊಂಡಿದೆ. ಅದನ್ನು ಪ್ರತಿನಿಧಿಗಳು ಬಳಸಿಕೊಂಡು ತಮ್ಮ ವ್ಯವಹಾರಗಳನ್ನು ಉನ್ನತಗೊಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ವೇದಿಕೆಯಲ್ಲಿ ಲಿಯಾಫಿ ಮುಖಂಡ ಪ್ರೇಮ್ ಕುಮಾರ್, ಖಜಾಂಚಿ ಸವಿತಾ, ಪ್ರಧಾನ ಕಾರ್ಯದರ್ಶಿ ಭೀಮಯ್ಯ, ಉಪಾಧ್ಯಕ್ಷ ಚಾಮ, ಪ್ರಮುಖರಾದ ಸತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net