

ಹುಬ್ಬಳ್ಳಿ: ಮೇಘಾಲಯ ರಾಜ್ಯದ ಗ್ರಂಥಾಲಯ ಸಮಿತಿ ನಿಯೋಗವು ಗುರುವಾರ ಬೆಂಗಳೂರಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ಕರ್ನಾಟಕ ವಿಧಾನ ಪರಿಷತ್ತಿನ ಇತಿಹಾಸ, ಕಾರ್ಯಕಲಾಪಗಳ ಬಗ್ಗೆ ಚರ್ಚೆ ನಡೆಸಿತು.
ವಿಧಾನ ಮಂಡಲದ ಮೇಲ್ಮನೆ, ಕೆಳಮನೆ, ವಿಧಾನ ಪರಿಷತ್ತಿನ ಕಾರ್ಯಕಲಾಪಗಳು ನಡೆಯುವ ಸಭಾಂಗಣದ ಕುರಿತು ಹೊರಟ್ಟಿಯವರು ವಿವರಿಸಿದರು.
ತಮ್ಮ ಕೊಠಡಿಯಲ್ಲಿ ಹಾಕಿದ 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದ ಚಿತ್ರವನ್ನು ತೋರಿಸಿ ನಿಯೋಗದ ಗಮನ ಸೆಳೆದು ಬಸವಣ್ಣನವರ ಸಂಸತ್ತಿನ ಪರಿಕಲ್ಪನೆ ಪ್ರಜಾಪ್ರಭುತ್ವದ ಮಹತ್ವದ ಕುರಿತು ಮಾಹಿತಿ ನೀಡಿದರು. ಬಸವಣ್ಣನವರು 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಪ್ರಜೆಗಳಿಗಾಗಿಯೇ ಪ್ರಜಾಪ್ರಭುತ್ವ ಎಂಬ ಆಡಳಿತ ವ್ಯವಸ್ಥೆಯನ್ನು ಅಂದೇ ತಂದಿದ್ದರು ಎಂದು ಹೇಳಿದರು.
ನಿಯೋಗದ ಅಧ್ಯಕ್ಷ ಜಿಮ್ ಸಂಗ್ಮಾ, ಸದಸ್ಯರಾದ ಓಲನ್ ಸೋಯಿನ್, ರೂಪರ್ಟ್ ಮೋವಿನ್, ಕರ್ತಸ್ ಮರಾಕ್, ಅರ್ಬಿನ್ಸ್ಟೋನ್ ಮರಾಕ್, ರೂಪಾ ಮರಾಕ್, ಅಧಿಕಾರಿಗಳಾದ ಎನ್.ಜಿ. ಸಾಯಿಬೋರ್ನ, ಜಾನ್ ಡಾಕರ್, ಇತರರು ಇದ್ದರು.
ನಿಯೋಗದ ವತಿಯಿಂದ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು.