

ಇಂದು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರ ಅಪಾರ ಮಹತ್ವ ಪಡೆಯುತ್ತಿದೆ. ಗ್ರಂಥಾಲಯಗಳು ಇತಿಹಾಸದುದ್ದಕ್ಕೂ ಜ್ಞಾನದ ಪಾಲಕನಾಗಿ, ಜ್ಞಾನದ ಭಂಡಾರಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗ, ಪ್ರೊ.ಮಲ್ಲಿನಾಥ ಕಂಬಾರ ಅಭಿನಂದನಾ ಸಮಿತಿ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಭೂತ, ವರ್ತಮಾನ ಮತ್ತು ಭವಿಷ್ಯತ್ ಪರಿಶೋಧನೆ ಕುರಿತ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭವಿಷ್ಯದ ಗ್ರಂಥಾಲಯಗಳು ಚುರುಕು, ಹೊಂದಾಣಿಕೆ ಮತ್ತು ನವೀನವಾಗಿರಬೇಕು. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ನಾವು ಮಾಹಿತಿಯನ್ನು ಸಂಘಟಿಸುವ, ವರ್ಗೀಕರಿಸುವ ಮತ್ತು ಹಿಂಪಡೆಯುವಲ್ಲಿ ಕೃತಕ ಬುದ್ಧಿಮತ್ತೆಯನ್ನು ಹೆಚ್ಚಾಗಿ ಬಳಕೆ ಮಾಡಬೇಕಿದೆ. ಇದು ಹೆಚ್ಚು ಬಳಕೆದಾರ ಸ್ನೇಹಿಯಾಗಿರುತ್ತದೆ. ಮಾತ್ರವಲ್ಲದೇ ಸಂಶೋಧಕರು ಅದ್ಭುತ ಆವಿಷ್ಕಾರಗಳನ್ನು ಮಾಡಲು ಅನುವು ಮಾಡಿಕೊಡುತ್ತವೆ ಎಂದರು.