ಗ್ರಂಥಾಲಯಗಳು ದೇವಾಲಯಗಳಿದ್ದಂತೆ

13 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಗ್ರಂಥಾಲಯಗಳು ದೇವಾಲಯಗಳಿದ್ದಂತೆ. ದೇವಸ್ಥಾನಗಳಲ್ಲಿ ಮನಸ್ಸಿಗೆ ನೆಮ್ಮದಿ, ಸ್ಫೂರ್ತಿ ನೀಡುವಂತೆ ಗ್ರಂಥಾಲಯಗಳು ಮನಸ್ಸಿಗೆ ನೆಮ್ಮದಿ ಹಾಗೂ ಮೆದುಳಿಗೆ ಅಪಾರವಾದ ಜ್ಞಾನ ನೀಡಿ ಉತ್ತಮ ಜೀವನಕ್ಕೆ ಸ್ಫೂರ್ತಿ ನೀಡುತ್ತವೆ ಎಂದು ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜನತ ಶಿಕ್ಷಣ ಸಮಿತಿಯ ಗ್ರಂಥಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಂಥಾಲಯಗಳು ಸ್ವಾಸ್ಥ್ಯ ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗ್ರಂಥಾಲಯಗಳಿಗೆ ಅದರದ್ದೇ ಆದ ರೂಪುರೇಷೆ ನೀಡಿ ಅವುಗಳ ಅಭಿವೃದ್ಧಿಗೆ ಕಾರಣರಾದವರು ಡಾ. ಎಸ್​.ಆರ್​. ರಂಗನಾಥನ್​. ಇವರು ಗ್ರಂಥಾಲಯದಲ್ಲಿ ಪಂಚಸೂತ್ರ ಮತ್ತು ಕೋಲೊನ್​ ವರ್ಗೀಕರಣ ಪರಿಚಯಿಸಿದವರು. ಹೀಗಾಗಿ ಅವರನ್ನು ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯಲಾಗುತ್ತದೆ ಎಂದರು.
ರಂಗನಾಥನ್​ ಅವರಿಗೆ ಗ್ರಂಥಗಳ ಜೊಡಣೆ ಮತ್ತು ವಿತರಣೆ ಬಗ್ಗೆ ಇರುವ ಅಪಾರ ಆಸಕ್ತಿ ಗಮನಿಸಿ ಮದ್ರಾಸು ವಿವಿ ಅವರನ್ನು ಇಂಗ್ಲೆಂಡಿನ್​ ಲಂಡನ್​ ಸ್ಕೂಲ್​ ಆಫ್ ಲೈಬ್ರರಿಯನ್​ ಎಂಬ ಶಿಕ್ಷಣ ಸಂಸ್ಥೆಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿಕೊಟ್ಟಿತು. ಅಲ್ಲಿ ಗ್ರಂಥಾಲಯ ವಿಜ್ಞಾನದ ಅಧ್ಯಯನ ಮಾಡಿದರು. ಇದರಿಂದ ಅವರಿಗೆ ಗ್ರಂಥಾಲಯ ವಿಜ್ಞಾನದ ಕಲ್ಪನೆ ದೊರೆಯಿತು. ಅವರ ಸಾಧನೆ ಹಾಗೂ ಸವಿ ನೆನಪಿಗಾಗಿ ಗ್ರಂಥಪಾಲಕ ದಿನ ಆಚರಿಸಲಾಗುತ್ತಿದೆ ಎಂದರು.
ಜೆಎಸ್​ಎಸ್​ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ನಾಗಚಂದ್ರ, ಮಹಾವೀರ ಉಪಾಧ್ಯೆ, ಶಾಂತಿನಾಥ ರೋಖಡೆ, ವಿಜಯಕುಮಾರ ದೇಶಬಾಗ್​, ಸಿಬ್ಬಂದಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net