

ತೇರದಾಳ : ಗುರುವಿನ ಕರುಣೆಯಿಂದ ಮಾತ್ರ ಮುಕ್ತಿ ಸಿಗಲು ಸಾಧ್ಯ ಎಂದು ಮಹಾವೀರ ಪ್ರಭು ಹೇಳಿದರು.
ತಾಲೂಕಿನ ಹಳಿಂಗಳಿ ಗ್ರಾಮದ ಅಲ್ಲಮಪ್ರಭು ದೇವಸ್ಥಾನದ ಆವರಣದಲ್ಲಿ ಭಾನುವಾರ ಮಹಾರಾಷ್ಟ್ರದ ಅಲ್ಲಮಪ್ರಭು ಆಲೂತಗಿ ಕ್ಷೇತ್ರ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗುರು ಭಕ್ತಿಯಿಂದ ನಮ್ಮೆಲ್ಲರ ಪಾಪಕರ್ಮಗಳು ಕರಗಿ ಪುಣ್ಯ ದೊರಕುತ್ತದೆ. ಆದ್ದರಿಂದ ಪ್ರತಿಯೊಬ್ಬರು ಗುರುಭಕ್ತಿಯನ್ನು ಶ್ರದ್ಧೆಯಿಂದ ಮಾಡಬೇಕು ಎಂದರು.
ಕ್ಷೇತ್ರದ ಜಾತ್ರೆಗೆ ಈ ಭಾಗದಿಂದ ಪಾದಯಾತ್ರೆ ಮೂಲಕ ತೆರಳುವ ಸಂಪ್ರದಾಯವು ಹಲವು ವರ್ಷಗಳಿಂದ ನಡೆದು ಬಂದಿದೆ. ಹೀಗಾಗಿ ದೇವಸ್ಥಾನದ ಅರ್ಚಕರು ಸೇರಿದಂತೆ ಅನೇಕ ಭಕ್ತರು ಪ್ರಭುವಿನ ಭಾವಚಿತ್ರದ ಪಲ್ಲಕ್ಕಿ ಉತ್ಸವದೊಂದಿಗೆ ಪಾದಯಾತ್ರೆ ಬೆಳೆಸಿದರು.
ಬಸಯ್ಯ ಮಠಪತಿ, ಶಿವು ಯರಗುದ್ರಿ, ಮಹಾವೀರ ಸಪ್ತಸಾಗರ, ಸಾಗರ ಲೋಕಾಪೂರ, ಗುರು ಹೆಗ್ಗಳಗಿ, ಭರತೇಶ ಲೋಕಾಪೂರ, ಭೀಮು ಚಿನಗಿ ಮತ್ತಿತರರಿದ್ದರು.