ಪಾಪ, ತಾಪ, ಶಾಪಕ್ಕೆ ವಚನಗಳಿಂದ ಮುಕ್ತಿ

Gavishree
Published on

ಬ್ಯಾಡಗಿ: ದೇವರಲ್ಲಿ ಸಂಪತ್ತು ಕೇಳುವಷ್ಟು ಬಡವ ನಾನಲ್ಲ. ನೋವಿಲ್ಲದ ಸಾವು ಹಾಗೂ ಇನ್ನೊಬ್ಬರ ಬಳಿ ಬೇಡದಂತಹ ಜೀವನ ಕೊಡು ಎನ್ನುವ ಮನೋಭಾವವನ್ನು ಭಕ್ತರು ಬೆಳೆಸಿಕೊಳ್ಳಬೇಕಿದೆ ಎಂದು ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಶ್ರೀಗಳು ಹೇಳಿದರು.

ಇಲ್ಲಿನ ಎಸ್‌ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ಗುರುವಾರ 12ನೇ ದಿನದ ಪ್ರವಚನ ನೀಡಿದರು. ಭಗವಂತನ ಬಳಿ ಬೇಡಿಕೆಯ ದೊಡ್ಡ ಪಟ್ಟಿಯೊಂದಿಗೆ ಸಂಕಲ್ಪ ಪೂಜೆ, ಹೋಮ ಇತ್ಯಾದಿ ಮಾಡಿಸುತ್ತೇವೆ. ಆದರೆ, ಶರಣರು ಇದನ್ನು ಬಯಸಲಿಲ್ಲ. ಸರ್ವರಿಗೂ ಒಳಿತಾಗಬೇಕು, ಮಾನವ ಧರ್ಮಕ್ಕೆ ಜಯವಾಗಬೇಕು, ಪ್ರತಿಯೊಬ್ಬರಲ್ಲಿ ಭಾವೈಕ್ಯ ಹಾಗೂ ಸದಾಚಾರ ಮೂಡಬೇಕು ಎಂದು ಇಚ್ಛಿಸುತ್ತಾರೆ.

ನಾವು ಭೂಮಿ ಮೇಲಿನ ಜೀವಗಳು ಅಷ್ಟೆ. ದೇವರು ನೀಡಿದಷ್ಟು ದಿನವಿದ್ದು ಪುನಃ ತೆರಳಲೇಬೇಕು. ಆ ಕೆಲ ದಿನಗಳ ಕಾಲ ಬದುಕಲು ಎಷ್ಟು ಹೋರಾಟ ನಡೆದಿದೆ ಎನ್ನುವುದನ್ನು ನಾವೆಲ್ಲ ಯೋಚಿಸಬೇಕಿದೆ.

ಇಂದ್ರಿಯಗಳ ಮನೆಯಲ್ಲಿ ಆಗಾಗ ಹೊಲಸಾಗುವ ಬಾಯಿ, ಮೂಗು, ಕಣ್ಣು, ನಾಲಿಗೆ ಸ್ವಚ್ಛಗೊಳಿಸಬೇಕು. ಇದಕ್ಕಾಗಿ ಗುರು, ಶರಣರ ಬಳಿ ತೆರಳಬೇಕು. ಶರಣರ ನಡೆ ನುಡಿ, ಆಶೀರ್ವಚನ, ಪ್ರವಚನಗಳು ಬದುಕಿಗೆ ದಾರಿದೀಪವಾಗಲಿವೆ.

ಮಾಡಿದ ಪಾಪ ಕಳೆಯಲು ಗಂಗೆಯ ಬಳಿ, ತಾಪ ಕಳೆದುಕೊಳ್ಳಲು ಚಂದ್ರನ ಬಳಿ, ಶಾಪ ಕಳೆದುಕೊಳ್ಳಲು ನಂಬಿದ ದೇವರ ಬಳಿ ತೆರಳುತ್ತೇವೆ. ಆದರೆ ಪಾಪ, ತಾಪ, ಶಾಪ ಈ ಮೂರಕ್ಕೂ ಶರಣರ ವಚನಗಳಿಂದ ಮುಕ್ತಿ ಸಿಗಲಿದೆ.

ದುಡಿದು ತಿನ್ನುವುದು ಮನುಷ್ಯ ಧರ್ಮ. ಶ್ರಮ ಜೀವನ ಕಾಯಕವಾಗಬೇಕು. ಜನ್ಮ ಜನ್ಮಗಳ ಸಂಸ್ಕಾರ ಫಲದಿಂದ ಮನುಷ್ಯ ಜನ್ಮ ಪಾವನವಾಗಿದೆ. ಆದರೆ, ಮನುಷ್ಯ ಪ್ರಾಣಿ, ಪಶು ಪಕ್ಷಿಗಳಿಂದ ಬುದ್ದಿವಂತಿಕೆ ಹಾಗೂ ವಿಕಾಸದಲ್ಲಿ ಶ್ರೇಷ್ಠತೆ ಪಡೆದಿದ್ದರೂ ಕೆಲವೊಮ್ಮೆ ಪಶುವಿಗಿಂತಲೂ ಕೀಳಾಗಿ ವರ್ತಿಸುವುದು ಹೇಯ ಕೃತ್ಯ.

ದೇವರು ವೈದ್ಯ ಎನ್ನುವ ಭಾವವಿದೆ. ವೈದ್ಯೋ ನಾರಾಯಣೋ ಹರಿ ಎಂಬ ನಾಣ್ಣುಡಿ ಇದೆ. ರೋಗಿ ವೈದ್ಯರ ಬಳಿ ಬಂದಾಗ ಆತನ ಪಾಕೇಟ್ ನೋಡದೆ, ಹೃದಯ ಕಾಣಬೇಕು. ರೈತರಿಗೆ ಬೀಜ, ವಿದ್ಯುತ್, ಗೊಬ್ಬರ ನೀರು ಅಗತ್ಯ. ರೈತರೆಂದು ಜನನಾಯಕನನ್ನು ಬಯಸುವುದಿಲ್ಲ, ಜಲನಾಯಕರ ಕಡೆ ತೆರಳುತ್ತಾರೆ. ರೈತ ಕುಲಕ್ಕೆ ನೀರಾವರಿ ಯೋಜನೆ, ಕೆರೆಕಟ್ಟೆಗಳು ನಿರ್ಮಾಣವಾಗಬೇಕು.

ಶಿಕ್ಷಕರು ವೃತ್ತಿಯನ್ನು ಪ್ರೀತಿಸಬೇಕು. ಮಕ್ಕಳಿಗೆ ಮನದಟ್ಟಾಗುವಂತೆ ಬೋಧಿಸಬೇಕು. ಶಿಕ್ಷಕರ ಸಂಬಳಕ್ಕೆ ಮಕ್ಕಳೇ ಅನ್ನದಾತರು ಎನ್ನುವುದನ್ನು ಮರೆಯಬಾರದು ಎಂದರು.

ಹೂವಿನ ಹಡಗಲಿ ಮಠದ ಡಾ.ಹಿರಿಶಾಂತ ಶ್ರೀಗಳು, ಬಳಗಾನೂರಿನ ಶಿವಶಾಂತವೀರ ಶರಣರು, ಸಂಗಣ್ಣ ಗಡಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net