

ಕಾರವಾರ: ವಿಶಿಷ್ಟ ಲೈಂಗಿಕತೆ ಹೊಂದಿರುವವರು (lgbtq) ಶಿಕ್ಷಣ, ಕಲೆ ಮುಂತಾದ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಲ್ಲಿ ಅವರು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯ. ಮತ್ತು ಅವರು `ಐಡೆಂಟಿಟಿ ಕ್ರೈಸಿಸ್‌ನಿಂದ ದೂರವಾಗಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ.ಹೇಳಿದರು.
ವಿಶಿಷ್ಟ ಲೈಂಗಿಕತೆ ಸಮುದಾಯ (lgbtq) ಸಂಘಟನೆಗಳ ಒಕ್ಕೂಟ, ಅಂತರಂಗ ಸಂಸ್ಥೆಯ ಸಹಯೋಗದಲ್ಲಿ ನಗರದ ಇಂದಿರಾಕಾಂತ ಸಭಾಭವನದಲ್ಲಿ ಆಯೋಜಿಸಿದ ವಿಶಿಷ್ಟ ಲೈಂಗಿಕತೆ ಹೊಂದಿರುವವರ 13 ನೇ ರಾಜ್ಯಮಟ್ಟದ ಸಮಾವೇಶ "ಸಾರಥ್ಯ ಸ್ವಾಭಿಮಾನ ಹಬ್ಬ"ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮನುಷ್ಯನಿಗೂ ಐಡೆಂಟಿಟಿ ಕ್ರೈಸಿಸ್ ಇದ್ದೇ ಇರುತ್ತದೆ. ಅದರಲ್ಲೂ ವಿಶಿಷ್ಟ ಲೈಂಗಿಕತೆ ಹೊಂದಿರುವವರು ತಮ್ಮ ಭಾವನೆಗಳಿಗೆ ಸಮಾಜದ ಮುಂದೆ ಹೇಳಿ ಅದಕ್ಕೆ ಮನ್ನಣೆ ದೊರಕಿಸಿಕೊಳ್ಳುವುದು ದೊಡ್ಡ ಸವಾಲು.
ಮಕ್ಕಳ ದತ್ತು, ಮದುವೆಯ ನೋಂದಣಿ ವಿಚಾರದಲ್ಲಿ ಉಂಟಾದ ಸಮಸ್ಯೆಗಳನ್ನು ಗಮನಿಸಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು ಸ್ವತಃ ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಿತ್ತು.
ಅದರಂತೆ ವಿಶಿಷ್ಟ ಲೈಂಗಿಕತೆ lgbtq ಹೊಂದಿರುವವರಿಗೆ ಎಲ್ಲ ವಿಷಯಗಳಲ್ಲೂ ಮಾನ್ಯತೆ ದೊರೆಯಬೇಕು ಎಂದು ಮಾನ್ಯ ನಾಯಾಯಾಲಯ ಆದೇಶ ಮಾಡಿದೆ. ಆದರೆ, ಸಮಾಜದಲ್ಲಿ ಇನ್ನೂ ಇವರ ಬಗ್ಗೆ ಭಿನ್ನತೆ ಹಾಗೆಯೇ ಇದೆ. ಅದನ್ನು ಹೋಗಲಾಡಿಸಲು ನಿಮ್ಮ ಪ್ರಯತ್ನಗಳೂ ಮುಖ್ಯವಾಗಿವೆ.
ಈ ವಿಶಿಷ್ಟ ಲೈಂಗಿಕತೆ ಹೊಂದಿರುವವರ ಭಾವನೆಗಳನ್ನು ಗುರುತಿಸುವಲ್ಲಿ ಪಾಲಕರಿಗೆ ಶಿಕ್ಷಣ ಬೇಕಿದೆ. ಅವರ ಮಾನಸಿಕ ದೈಹಿಕ ಬದಲಾವಣೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂಬ ಅರಿವು ಸಮಾಜದಲ್ಲಿ ಮೂಡಬೇಕಿದೆ ಎಂದರು. ಒಕ್ಕೂಟದ ಅಧ್ಯಕ್ಷ ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, 2010 ರಲ್ಲಿ ಸಾರಥ್ಯ ಒಕ್ಕೂಟ ಪ್ರಾರಂಭವಾಯಿತು. ಲಿಂಗತ್ವ ಅಲ್ಪಸಂಖ್ಯಾತರು ಎಂದರೆ ಹಲವು ವಿಧಗಳಿವೆ. ಅದರಲ್ಲಿ ಕೋತಿ, ಡಿಡಿ, ಹಾಗೂ ಬೈ ಸೆಕ್ಷುವಲ್ ವಿಧದವರ ಬಗ್ಗೆ ಒಕ್ಕೂಟ ಕಾರ್ಯ ನಿರ್ವಹಿಸುತ್ತಿದೆ. ಅವರ ಅಗತ್ಯ ಸೌಲಭ್ಯ ಒದಗಿಸುವುದು, ಬೇಡಿಕೆ ಈಡೇರಿಸುವ ಕುರಿತು ಹೋರಾಟ ಮಾಡುತ್ತಿದ್ದೇವೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿರೂಪಾಕ್ಷಗೌಡ ಪಾಟೀಲ್, ರಂಗಕರ್ಮಿ, ನಿರ್ದೇಶಕಿ ಮಂಗಳಾ ಎನ್., ಬದುಕು ಸಂಘಟನೆಯ ಗೀತಾ, ಯುಆರ್ ಡಿಎಸ್ ಸಂಘಟನೆತ ಸತೀಶ , ಒಕ್ಕೂಟದ ಶ್ಯಾಮ್, ಸೃಷ್ಟಿರಾಜ್ ವೇದಿಕೆಯಲ್ಲಿದ್ದರು.
ಕೋತಿ ಸಮುದಾಯದ ಮಂಜುನಾಥ ಮಾತನಾಡಿ, ಸಮಾಜ ಬದಲಾಗಬೇಕು. ನಮ್ಮ ಭಾವನೆಗಳಿಗೆ ಬೆಲೆ ಕೊಡಿ ಎಂದು ಪ್ರಾರ್ಥಿಸಿದರು. ಸಮಾಜವನ್ನು ಎದುರಿಸಲು ಶಿಕ್ಷಣ, ಕಲೆಯಲ್ಲಿ ನಾವು ಗುರುತಿಸಿಕೊಳ್ಳಬಕು. ಮಾನಸಿಕವಾಗಿ ಸದೃಢರಾಗಬೇಕು ಎಂದು ಸಮಾಜ ಬಾಂಧವರಿಗೆ ಸಲಹೆ ನೀಡಿದರು. ಡಿಡಿ ಸಮುದಾಯದ ಸಮೀರ್ ಮಾತನಾಡಿ, ಎರಡೂ ಪಾತ್ರ ಮಾಡುವವರನ್ನು ಡಿಡಿ ಸಮುದಾಯ ಎಂದು ಕರೆಯುವರು. ಬಲವಂತದ ಮದುವೆಗಳು ಹೆಚ್ಚಾಗುತ್ತಿವೆ. ಅವುಗಳನ್ನು ತಡೆಯಲು ಕ್ರಮವಾಗಬೇಕು ಎಂದು ಆಗ್ರಹಿಸಿದರು. ಬೈ ಸೆಕ್ಷುವಲ್ (ದ್ವಿ ಲಿಂಗಿ) ಸಮುದಾಯದ ಕೃಷ್ಣಮೂರ್ತಿ ಮಾತನಾಡಿ, ಮಂಗಳಮುಖಿಯರು ಸೀರೆ ಹಾಕುವುದರಿಂದ ಎಲ್ಲರಿಗೂ ಗೊತ್ತಾಗುತ್ತದೆ. ಆದರೆ, ಇತರ ಸಮುದಾಯದವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಅವರ ಲಿಂಗತ್ವದ ಬಗ್ಗೆ ಬೇರೆ ಅಧಿಕಾರಿಗಳು ಸರ್ಟಿಫಿಕೇಟ್ ಕೊಡುವಂತಾಗಬಾರದು. ಅವರೇ ಗುರುತಿಸಿಕೊಳ್ಳುವ ಅವಕಾಶ ಇರಬೇಕು. ಅಽಕಾರಿಗಳು ಕಾಯ್ದೆಗಳನ್ನು ಅರಿತುಕೊಂಡು ವರ್ತಿಸಬೇಕು ಎಂದರು.