

ಬೂದಿಕೋಟೆ: ಜಿಲ್ಲೆಯಲ್ಲಿ ಎಲೆಕೋಸು ಬೆಳೆದ ರೈತರು ಈ ಬಾರಿ ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದರು. ಆದರೆ, ಇತ್ತೀಚೆಗೆ ಸುರಿದ ಸತತ ಮಳೆಯಿಂದ ಬೆಳೆ ರೋಗಕ್ಕೆ ತುತ್ತಾಗಿ, ಬೇಡಿಕೆ ಕುಸಿದಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.
ಬಂಗಾರಪೇಟೆ ತಾಲೂಕಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಎಲೆಕೋಸು ಬೆಳೆಯಲಾಗುತ್ತದೆ. ಇಲ್ಲಿಂದ ರೈತರು ರಾಜ್ಯ ಸೇರಿ ನೆರೆ ರಾಜ್ಯಗಳಿಗೆ ಸಾಗಿಸಿ ಮಾರಾಟ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದರು. ಆದರೆ, ಈ ಬಾರಿ ಉತ್ತಮ ಇಳುವರಿ ಹಾಗೂ ಗರಿಷ್ಠ ಬೆಲೆ ನಿರೀಕ್ಷೆಯಲ್ಲಿದ್ದಂತಹ ರೈತರಿಗೆ ಅಕಾಲಿಕ ಮಳೆ ನಿರೀಕ್ಷೆಯನ್ನು ಹುಸಿಗೊಳಿಸಿದೆ.
ಇತ್ತೀಚೆಗೆ ಸುರಿದ ಮಳೆಯಿಂದ ತೇವಾಂಶ ಜಾಸ್ತಿಯಾಗಿ ಎಲೆಕೋಸು ಬೆಳೆ ರೋಗಕ್ಕೆ ತುತ್ತಾಗಿದ್ದು, ಬೆಳೆಯೆಲ್ಲಾ ಒಣಗಿದೆ. ಕಟಾವು ಹಂತದಲ್ಲಿದ್ದಂತ ಬೆಳೆ ಗುಣಮಟ್ಟ ಕಳೆದುಕೊಂಡು ಬೆಲೆ ಕುಸಿತವಾಗಿದೆ.
ದಿಢೀರ್ ಬೆಲೆ ಕುಸಿತ: ಎಲೆಕೋಸಿಗೆ ನಿವಾರ್ ಚಂಡಮಾರುತ ಆರಂಭಕ್ಕೂ ಮುಂಚೆ ಉತ್ತಮ ಬೆಲೆ ಇತ್ತು. ಮಳೆಗೆ ಸಿಲುಕಿದ ನಂತರ ದಿಢೀರ್ ಬೆಲೆ ಕುಸಿತ ಕಂಡಿದ್ದು, ಗುಣಮಟ್ಟದ ಎಲೆಕೋಸು ಪ್ರತಿ ಲೋಡ್ 25000ರಿಂದ 30000 ರೂ.ಗಳಿಗೆ ಮಾತ್ರ ಮಾರಾಟವಾಗುತ್ತಿದೆ. ಒಂದು ಎಕರೆ ಪ್ರದೇಶದಲ್ಲಿ ಎಲೆಕೋಸು ಬೆಳೆಯಲು ಸುಮಾರು 25 ಸಾವಿರ ರೂ. ಖರ್ಚು ಆಗುತ್ತಿದ್ದು, ಮಳೆಯಿಂದಾದ ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುವಂತಾಗಿದೆ.
15 ದಿನ ಸುರಿದ ಸತತ ಮಳೆಯಿಂದ ಎಲೆಕೋಸಿಗೆ ಅಂಗಮಾರಿಯಂತಹ ರೋಗ ತಗುಲಿದ್ದು, ಬೆಳೆ ಗುಣಮಟ್ಟ ಕಳೆೆದುಕೊಂಡಿದೆ. ಹೊರ ರಾಜ್ಯಗಳಿಂದ ಬೇಡಿಕೆ ಇಲ್ಲದೆ ಬೆಲೆ ಕುಸಿತ ಕಂಡಿದ್ದು, ಚೆನ್ನೈ ಮಾರುಕಟ್ಟೆಯಲ್ಲಿ ಮೂಟೆ ಕೇವಲ 400ರಿಂದ 500 ರೂ.ಗಳಿಗೆ ಮಾರಾಟವಾಗುತ್ತಿದೆ. | ಚಂದ್ರಪ್ಪ, ಎಲೆಕೋಸು ವ್ಯಾಪಾರಿ ಕೋಡಗುರ್ಕಿ ನಿವಾರ್ ಮತ್ತು ಬುರೇವಿ ಚಂಡಮಾರುತಗಳಿಂದ ಸುರಿದ ಮಳೆಯಿಂದ ಒಂದೂವರೆ ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂ, ವೆಚ್ಚ ಮಾಡಿ ಬೆಳೆದ ಎಲೆಕೋಸಿಗೆ ತೇವ ಹೆಚ್ಚಾಗಿ ಒಣಗಲಾರಂಭಿಸಿತು. ಎಷ್ಟೇ ಕೀಟನಾಶಕ ಸಿಂಪಡಣೆ ಮಾಡಿದರೂ ರೊಗ ಹತೋಟಿಗೆ ಬರದೆ ಸಂಪೂರ್ಣ ನಾಶವಾಗಿ ಬೆಳೆಗೆ ಹಾಕಿದ ಸಾಲ ತೀರಿಸಲು ದಿಕ್ಕು ತೋಚದಂತಾಗಿದೆ. | ಕಾಂತರಾಜ್, ರೈತ ಗುಟ್ಟೂರು ಗ್ರಾಮ