

ಹರಪನಹಳ್ಳಿ: ಅಂಚೆ ಇಲಾಖೆ ಜನರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಹಿಕ್ಕಿಮಗೇರಿ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೆ ರಾಜ ಕಾಲದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂದೇಶ ಕಳುಹಿಸಬೇಕಾದರೆ ಪಾರಿವಾಳ, ಕುದುರೆಗಳ ಮೂಲಕ ಪತ್ರಗಳನ್ನು ರವಾನಿಸಲಾಗುತ್ತಿತ್ತು. ನಂತರ ಬ್ರಿಟಿಷರ ಕಾಲದಲ್ಲಿ ಪೋಸ್ಟ್‌ಮ್ಯಾನ್ ಮೂಲಕ ಪತ್ರ ವಿನಿಮಯ ಆರಂಭವಾಯಿತು. ಸ್ವಾತಂತ್ರ್ಯದ ಬಳಿಕ ಜನರು ಪತ್ರ ವ್ಯವಹಾರಗಳನ್ನು ಅಂಚೆ ಇಲಾಖೆ ಮೂಲಕ ನಡೆಸುತ್ತಿದ್ದರು. ಭಾವನೆ ವ್ಯಕ್ತಪಡಿಸಲು ಪತ್ರಗಳು ಸಹಕಾರಿಯಾಗಿವೆ ಎಂದರು.
ಅಂಚೆ ಅಧಿಕ್ಷಕ ವಿ.ಎಲ್.ಚಿತ್ತಕೋಟೆ ಮಾತನಾಡಿ, ಅಂಚೆ ಇಲಾಖೆ ಜನರ ಜೀವಾಳವಾಗಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂದೇಶವನ್ನು ರವಾನಿಸುವ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಂದು ಕೇಂದ್ರ ಸರ್ಕಾರ ಅಂಚೆ ಕಛೇರಿಯ ಮೂಲಕ ಹೊಸ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಬಳ್ಳಾರಿ ಅಂಚೆ ವಿಭಾಗದ ಅಂಚೆ ಅಧಿಕ್ಷಕ ವಿ.ಎಲ್.ಚಿತ್ತಕೋಟೆ, ಉಪವಿಭಾಗದ ಅಂಚೆ ನಿರೀಕ್ಷಕ ಎನ್.ಸುರೇಶ್, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಪುರಸಭೆ ಅಭಿಯಂತರ ಜಿ.ಯು.ಎಂ.ಸಿದ್ದೇಶ್ವರ ಸ್ವಾಮಿ, ಅರಸೀಕೆರೆ ಪೋಸ್ಟ್ ಮಾಸ್ಟರ್ ವೆಂಕಟೇಶ್, ಮುಖ್ಯ ಶಿಕ್ಷಕಿಯರಾದ ಕೆ.ಜಯಶ್ರೀ, ಕಡಬಗೇರಿ ಗ್ರಾಪಂ ಅಧ್ಯಕ್ಷ ಮಂಜುನಾಥ, ಸದಸ್ಯೆ ಅನುಷಾ ಮಂಜುನಾಥ, ಮುಖಂಡರಾದ ಮತ್ತೂರು ಬಸವರಾಜ್, ಹೆಚ್.ಶಿವರಾಜ್, ಸಾಸ್ವಿಹಳ್ಳಿ ನಾಗರಾಜ್, ಪ್ರಸಾದ್ ಕಾವಡಿ. ಅರಸೀಕೆರೆ ನವೀನ್, ಪರಶುರಾಮ ಇದ್ದರು.