

ದೊಡ್ಡಬಳ್ಳಾಪುರ: ಇಡೀ ಸೃಷ್ಟಿ ನಿಂತಿರುವುದು ಅಕ್ಷರದ ಮೇಲೆ. ಯಾವುದಕ್ಕೆ ನಾಶ ಇಲ್ಲವೋ ಅದು ಅಕ್ಷರ. ಇದಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ ಎಂದು ನ್ಯಾಷನಲ್ ಪೆಡ್ ಶಾಲೆಯ ಕಾರ್ಯದರ್ಶಿ ಸತೀಶ್ ರಾಜ್ ತಿಳಿಸಿದರು.
ನಗರದ ಕರನೇಹಳ್ಳಿಯ ನ್ಯಾಷನಲ್ ಪೆಡ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತು ನಿಂತಿರುವುದು ಅಕ್ಷರದಿಂದ. ಆದಿ, ಅಂತ್ಯ ಯಾವುದಕ್ಕೆ ಇಲ್ಲವೋ ಅದು ಜ್ಞಾನ. ಅಕ್ಷರದಿಂದ ಉತ್ತಮ ಪ್ರಪಂಚ ಉಗಮವಾಗಿದೆ. ಕಣ್ಣಿಗೆ ಕಾಣುವ ಸಕಲ ಜೀವರಾಶಿಗಳಲ್ಲೂ ಅಕ್ಷರ ಅಡಕವಾಗಿದೆ ಎಂದು ತಿಳಿಸಿದರು. ಶಾಲೆ ಅಧ್ಯಕ್ಷ ನಾಗರಾಜು ಮಾತನಾಡಿ, ಜ್ಞಾನ ಎಂಬುದು ಸುಲಭವಾಗಿ ದಕ್ಕುವುದಿಲ್ಲ. ಸಾಕಷ್ಟು ಪರಿಶ್ರಮ ಅಭ್ಯಾಸ ಮಾಡಬೇಕು. ಮಕ್ಕಳು ಆರಂಭದಲ್ಲಿ ತಮ್ಮ ಪಾಲಕರಿಂದ ಅಕ್ಷರಾಭ್ಯಾಸ ಪ್ರಾರಂಭಿಸುತ್ತಾರೆ. ಮಕ್ಕಳಿಗೆ ಯಾರೇ ಶಿಕ್ಷಣ ಕಲಿಸಿದರೂ, ತಾಯಿಯಿಂದ
ಕಲಿಯುವ ಶಿಕ್ಷಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.