ವಿವಿಯ ಅಕ್ರಮ ಬಗ್ಗೆ ರಾಜ್ಯಪಾಲರಿಗೆ ಪತ್ರ

Published on

ಬಳ್ಳಾರಿ ; ಕಳೆದ ಮೂರ‌್ನಾಲ್ಕು ತಿಂಗಳಲ್ಲೇ ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ವಿರುದ್ಧ ಕೇಳಿ ಬಂದಿರುವ ಅಕ್ರಮದ ಆರೋಪಗಳ ಬಗ್ಗೆ ವಿವಿ ಸಿಂಡಿಕೇಟ್ ಸದಸ್ಯರೊಬ್ಬರು ರಾಜ್ಯಪಾಲರಿಗೆ ಪತ್ರ ಬರೆಯಲು ಮುಂದಾಗಿದ್ದಾರೆ.

ವಿಎಸ್‌ಕೆ ವಿವಿಯಲ್ಲಿ ಕಳೆದ ಕೆಲ ದಿನಗಳ ಹಿಂದ ಬೋಧಕ ಮತ್ತು ಬೋಧಕೇತರ ಹಾಗೂ ಹೊರಗುತ್ತಿಗೆ ಸಿಬ್ಬಂದಿ ಮೀಟರ್ ಬಡ್ಡಿ ದಂಧೆಯಡಿ ಗುತ್ತಿಗೆ ನೌಕರೊಬ್ಬ ಆತ್ಮಹತ್ಯೆ, ಗುತ್ತಿಗೆ ನೌಕರರ ವೇತನದಲ್ಲಿ ಪಿಎಫ್ ಅಕ್ರಮ, ವಿವಿ ವ್ಯಾಪ್ತಿಯ ಕೆಲ ಬಿ.ಎಡ್ ಕಾಲೇಜುಗಳ ಪ್ರಶಿಕ್ಷಣಾರ್ಥಿಗಳ ಫಲಿತಾಂಶ ಹೆಚ್ಚಿಸಲು ಆನ್‌ಲೈನ್‌ನಲ್ಲಿ ಹೆಚ್ಚಿನ ಅಂಕ ನಮೂದು, ಅಂಕಪಟ್ಟಿಯ ಕಾಗದದ ಖರೀದಿಯಲ್ಲಿ ಕೋಟ್ಯಾಂತರ ರೂ. ಅಕ್ರಮ, ಗುತ್ತಿಗೆ ನೌಕರರೊಬ್ಬ ಕುಲಸಚಿವರ ಫೋರ್ಜರಿ ಸಹಿ, ಪದವಿಯ ಅಂಕಪಟ್ಟಿಯಲ್ಲಿ ಗೊಂದಲ, ಬಿ.ಇಡಿ ಫಲಿತಾಂಶ ಪ್ರಕಟಿಸದೆ ವಿಳಂಬ ಸೇರಿದಂತೆ ಸಾಲು ಸಾಲು ಆರೋಪಗಳು ಕೆಲ ದಿನಗಳಲ್ಲೇ ಬಹಿರಂಗಗೊಂಡಿವೆ. ಇಷ್ಟು ಪ್ರಮಾಣದ ಆರೋಪಗಳು ಕೆಲ ದಿನಗಳಲ್ಲೇ ವಿವಿ ವಿರುದ್ಧ ಕೇಳಿ ಬಂದಿವೆ. ಅಕ್ರಮದ ಬಗ್ಗೆ ಆರೋಪ ಹೊರ ಬೀಳುತ್ತಿದ್ದಂತೆ ತನಿಖಾ ತಂಡ ರಚಿಸಿ ವರದಿ ಬಂದ ಬಳಿಕ ಕ್ರಮ ಜರುಗಿಸಲಾಗುವುದು ಎಂಬುದಾಗಿ ಹೇಳಿಕೆ ನೀಡುವುದು ಸಾಮಾನ್ಯವಾಗಿದೆ. ಆದರೆ, ಅಕ್ರಮಗಳ ವಿವಿ ತಂಡ ರಚಿಸಿ ವಿಚಾರಣೆ ನಡೆಸಿದ್ದು ಬಿಟ್ಟರೆ ಈವರೆಗೂ ಯಾವುದೇ ವರದಿಯು ಬಹಿರಂಗಪಡಿಸದೆ ಹಾಗೂ ಕ್ರಮಕ್ಕೆ ಮುಂದಾಗದೆ ಇರುವುದು ಸಿಂಡಿಕೇಟ್ ಸದಸ್ಯರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆದ್ದರಿಂದ, ಸಿಂಡಿಕೇಟ್ ಸದಸ್ಯರೊಬ್ಬರು ಕೆಲ ಅಕ್ರಮಗಳ ಬಗ್ಗೆ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಸಂಗ್ರಹಿಸಲು ಮುಂದಾಗಿದ್ದಾರೆ. ದಾಖಲೆಗಳನ್ನು ಸಂಗ್ರಹಿಸಿದ ಬಳಿಕ ರಾಜ್ಯಪಾಲರ ಮುಂದೆ ಪ್ರಸ್ತುತಪಡಿಸಿ ತಪ್ಪಿಸ್ಥರ ಕ್ರಮಕ್ಕೆ ಮುಂದಾಗಲು ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಸಭೆಯಲ್ಲಿ ಪ್ರಸ್ತಾಪ : ವಿವಿಯಿಂದ ನೂತನವಾಗಿ ಸಿಂಡಿಕೇಟ್ ಸದಸ್ಯರಾದ ನೇಮಕವಾದ ಬಳಿಕ ಕುಲಪತಿ ಅಧ್ಯಕ್ಷತೆಯಲ್ಲಿ ಎರಡ್ಮೂರು ಬಾರಿ ಸಿಂಡಿಕೇಟ್ ಸಭೆ ನಡೆಸಿದರೂ ಅಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಆದರೆ, ಕೆಲ ದಿನಗಳ ಹಿಂದ ವಿವಿಯ ನಡೆ ಬಗ್ಗೆ ಅನುಮಾನ ಮೂಡಿರುವುದರಿಂದ ಮುಂಬರುವ ತಿಂಗಳಲ್ಲೇ ಸಿಂಡಿಕೇಟ್ ಸದಸ್ಯರ ನೇತೃತ್ವದಲ್ಲಿ ಸಭೆಯಲ್ಲಿ ಆಯೋಜಿಸಲಿದ್ದು ಕೆಲ ಅಕ್ರಮದ ದಾಖಲೆಗಳನ್ನು ಸಭೆಯಲ್ಲಿ ಬಹಿರಂಗಪಡಿಸಿ ಪ್ರಸ್ತಾಪಿಸಲಾಗುವುದು ಎಂದು ಸದಸ್ಯರೊಬ್ಬರು ತಿಳಿಸಿದರು.

ವಿವಿ ನಡೆ ಅನುಮಾನ : ವಿವಿಯ ಅಂಕಪಟ್ಟಿಯ ಕಾಗದದ ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸ್ವತಃ ಕುಲಪತಿ ಅವರೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸರ್ಕಾರದಿಂದ ಮರು ಉತ್ತರ ಬರುವವರೆಗೂ ಕಾಯದೇ ಆರೋಪದ ಹೊಣೆ ಹೊತ್ತಿರುವ ಪ್ರಾಧ್ಯಾಪಕರಿಗೆ ವಿವಿಯ ವಿಭಾಗದ ಮುಖ್ಯ ಡೀನರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಅಲ್ಲದೆ, ಇತ್ತೀಚೆಗೆ ಗುತ್ತಿಗೆ ನೌಕರ ಆತ್ಮಹತ್ಯೆ ಆರೋಪದಡಿ ಪ್ರಾಧ್ಯಾಪಕರ ವಿರುದ್ಧ ದೂರು ದಾಖಲಾಗಿದೆ. ಆ ಪ್ರಾಧ್ಯಾಪಕರು ದೀರ್ಘ ರಜೆ ಪಡೆದು ತೆರಳಿದ್ದಾರೆ ಎಂಬುದಾಗಿ ವಿವಿ ಆಡಳಿತ ಮಂಡಳಿ ಸಿಂಡಿಕೇಟ್ ಸದಸ್ಯರಿಗೆ ತಿಳಿಸಿದ್ದಾರೆ. ಆದರೆ, ಅದೇ ಪ್ರಾಧ್ಯಾಪಕರು ಇತ್ತೀಚೆಗೆ ವಿವಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ್ದಾರೆ ಎಂಬುದಾಗಿ ಮಾಹಿತಿಯಿದೆ.

ಕೋಟ್... ಕಳೆದ ಕೆಲ ದಿನಗಳ ಹಿಂದ ವಿವಿ ವಿರುದ್ಧ ಕೇಳಿ ಬಂದಿರುವ ಆರೋಪಗಳ ದಾಖಲೆಗಳನ್ನು ಸಂಗ್ರಹಿಸುತ್ತಿರುವೆ. ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಬಹಿರಂಗಪಡಿಸಲಾಗುವುದು. ಈ ಎಲ್ಲ ಅಕ್ರಮಗಳ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆಯುವೆ. ಗುತ್ತಿಗೆ ನೌಕರರೊಬ್ಬ ಆತ್ಮಹತ್ಯೆ ಪ್ರಕರಣದ ಅರೋಪದಡಿ ಪ್ರಾಧ್ಯಾಪಕರು ದೀರ್ಘ ರಜೆ ತೆರಳಿದ್ದಾರೆ ಎಂಬುದಾಗಿ ವಿವಿ ತಿಳಿಸಿದೆ. ಅವರ ಪ್ರಾಧ್ಯಾಪಕರ ದಾಖಲಾತಿ ಪುಸ್ತಕ ಪರಿಶೀಲಿಸುವೆ.

- ಕೆ.ಶಿವಕುಮಾರ, ಸಿಂಡಿಕೇಟ್ ಸದಸ್ಯ, ವಿವಿ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net