

ಕೆ.ಆರ್.ನಗರ: ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದ್ದು ಈ ಬಗ್ಗೆ ಕ್ರಮ ಕೈಗೊಂಡು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು.
ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಬಾಣಂತಿಯರು ಮತ್ತು ಗರ್ಭಿಣಿಯರೊಂದಿಗೆ ಮಾತನಾಡಿ, ರೋಗಿಗಳನ್ನು ಪ್ರೀತಿ ಮತ್ತು ಮಮತೆಯಿಂದ ನೋಡಿಕೊಳ್ಳಬೇಕು ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ನನಗೆ ಈಗ ಜನಿಸಿರುವ ಮಗು ಸೇರಿ ಮೂರು ಮಕ್ಕಳು ಹೆಣ್ಣು ಎಂದು ಕಣ್ಣೀರು ಹಾಕಿದಾಗ ಆ ತಾಯಿಯನ್ನು ಸಂತೈಸಿ ಯಾವುದೇ ಕಾರಣಕ್ಕೂ ನೀನು ಧೃತಿಗೆಡದೆ ಹೆಣ್ಣು ಮಕ್ಕಳನ್ನೇ ಚೆನ್ನಾಗಿ ಓದಿಸಿ ಶಿಕ್ಷಿತರನ್ನಾಗಿ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಡಿ ಎಂದು ಧೈರ್ಯ ತುಂಬಿದರು.
ಆಕೆಗೆ ಮೊಬೈಲ್ ಸಂಖ್ಯೆ ನೀಡಿದ ಆಯೋಗದ ಅಧ್ಯಕ್ಷರು ನಿನಗೆ ಯಾವುದೇ ಸಮಸ್ಯೆ ಇದ್ದರೂ ನನಗೆ ಕರೆ ಮಾಡಿ ಎಂದು ಹೇಳಿ ನಿನ್ನ ಮಕ್ಕಳ ಓದು ಮತ್ತು ಭವಿಷ್ಯಕ್ಕೆ ಸರ್ಕಾರದಿಂದ ದೊರೆಯುವ ಎಲ್ಲ ಸವಲತ್ತುಗಳನ್ನು ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸ್ವಚ್ಛತೆಯನ್ನು ಕಾಪಾಡುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಕೆ.ಆರ್.ನಗರ ಸೇರಿದಂತೆ ಸುತ್ತಮುತ್ತಲಿನ ನಾಲ್ಕಾರು ಜಿಲ್ಲೆಯ ರೋಗಿಗಳು ಚಿಕಿತ್ಸೆಗೆ ಬರುತ್ತಿರುವುದರಿಂದ ಒತ್ತಡ ಹೆಚ್ಚಾಗಿದೆ ಎಂದರು.
ಆರೋಗ್ಯ ಇಲಾಖೆಗೆ ನಿಯೋಜನೆ ಮೇಲೆ ಕೆಲಸ ಮಾಡುತ್ತಿರುವವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸುವಂತೆ ಆದೇಶ ಮಾಡಿರುವುದರಿಂದ ಸಿಬ್ಬಂದಿ ಕೊರತೆ ಉಂಟಾಗಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ಇದು ಸಿಬ್ಬಂದಿ ಸಮಸ್ಯೆಗೆ ಮೂಲ ಕಾರಣವಾಗಿದ್ದು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಬಿ.ಜೆ.ನವೀನ್ ಕುಮಾರ್ ಇದ್ದರು.
ಬಳಿಕ ಪಟ್ಟಣದ ಹಾಸನ-ಮೈಸೂರು ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ನಟರಾಜು, ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಸಮಾಜ ಕಲ್ಯಾಣಾಧಿಕಾರಿ ಎಚ್.ಎಲ್.ಶಂಕರ್‌ಮೂರ್ತಿ, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಾಣಿಬಾಲಶಂಕರ್, ಕೆ.ಆರ್.ನಗರ ಘಟಕದ ಅಧ್ಯಕ್ಷೆ ಲತಾರವಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಲೋಕೇಶ್, ಎಚ್.ಎಚ್.ನಾಗೇಂದ್ರ, ಡಾ.ಭವಾನಿ, ಡಾ.ದರ್ಶನ್, ಡಾ.ಚಂದ್ರಶೇಖರ್, ಡಾ.ದೀಪ್ತಿ, ಡಾ.ವೇದಾವತಿ, ಡಾ.ಪ್ರೇಮಲತಾ, ಡಾ.ದಿವ್ಯಾ ಇತರರು ಇದ್ದರು.