

ಉಪ್ಪಿನಬೆಟಗೇರಿ: ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವುದು ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಇದೇ ವಿಷಯವಾಗಿ ಧಾರವಾಡದ ಸಾಮಾಜಿಕ ಕಾರ್ಯಕರ್ತರೊಬ್ಬರು ವರ್ಷದ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದರು.
ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ, ಗರಗ ಗ್ರಾಮಗಳ ರೈತರ ಪಹಣಿ ಪತ್ರಿಕೆಯಲ್ಲಿ ವಕ್ಫ್ ಹೆಸರು ದಾಖಲಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ರೈತರು, ವಿವಿಧ ಸಂಘಟನೆಗಳು ಧಾರವಾಡ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿದ್ದರು.
ತಮ್ಮೂರಿನ ರೈತರು ಪಹಣಿ ತಿದ್ದುಪಡಿಗಾಗಿ ತಹಸೀಲ್ದಾರ್ ಕಚೇರಿ ಮತ್ತು ವಕ್ಫ್ ಬೋರ್ಡ್‌ಗೆ ಅಲೆದಾಡುತ್ತಿರುವುದನ್ನು ಗಮನಿಸಿದ್ದ ಉಪ್ಪಿನಬೆಟಗೇರಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ಪ ಬುದ್ನಿ ಅವರು, 2023ರ ನವೆಂಬರ್ 28ರಂದೇ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು, ವಕ್ಫ್ ಬೋರ್ಡ್ ಹೆಸರು ಯಾವ ಮಾನದಂಡದ ಆಧಾರದ ಮೇಲೆ ಸೇರ್ಪಡೆಯಾಗಿದೆ. ಮುಂದೆ ಅದರಿಂದ ಆಗುವ ಗಂಭೀರ ಸ್ವರೂಪದ ಅನ್ಯಾಯ ಸರಿಪಡಿಸುವಂತೆ ಕೇಳಿಕೊಂಡಿದ್ದರು.
ಪತ್ರ 2023ರ ಡಿಸೆಂಬರ್‌ನಲ್ಲಿ ಪ್ರಧಾನಿ ಕಚೇರಿಗೆ ತಲುಪಿತ್ತು. ನಂತರ ಡಿ. 8ರಂದು ಕೃಷ್ಣಪ್ಪ ಅವರಿಗೆ ಪಿಎಂ ಕಚೇರಿಯಿಂದ ಪತ್ರವೂ ಬಂದಿತ್ತು. ಈ ಪತ್ರದ ಕುರಿತಾಗಿಯೇ ಪ್ರಧಾನಿ ಕಚೇರಿ ಸಿಬ್ಬಂದಿ ದೂರವಾಣಿ ಮೂಲಕ ಮತ್ತಷ್ಟು ಮಾಹಿತಿ ಪಡೆದಿದ್ದರು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ.
ಮೂರನೇ ಅವಧಿಗೆ ಪ್ರಧಾನಿಯಾದ ನರೇಂದ್ರ ಮೋದಿ, ಪ್ರಸಕ್ತ ವರ್ಷದ ಜುಲೈನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆದರೆ, ಅದು ಸಮಗ್ರವಾಗಿ ಚರ್ಚೆಯಾಗಿರಲಿಲ್ಲ. ಈ ಮಧ್ಯೆಯೇ ಈಗ ಕರ್ನಾಟಕದಲ್ಲಿ ವಕ್ಫ್ ಗಲಾಟೆ ಜೋರಾಗಿದೆ. ವಕ್ಫ್ ಬೋರ್ಡ್ ಹೆಸರಿನಲ್ಲಿ ಆಗುತ್ತಿರುವ ಅನ್ಯಾಯಕ್ಕೆ ಸಂಬಂಧಿಸಿದಂತೆ 2018ರಿಂದಲೇ ಧಾರವಾಡದಿಂದ ಹೋರಾಟ ಆರಂಭವಾಗಿದ್ದವು. ಆದರೆ, ಈಗ ಅವೆಲ್ಲವೂ ಹೆಚ್ಚು ಚರ್ಚೆಗೆ ಬರುತ್ತಿವೆ.
ಸರ್ಕಾರಿ ಆಸ್ತಿಗಳಿಗೆ ವಕ್ಫ್ ಬೋರ್ಡ್ ಹೆಸರು ಹೇಗೆ ಬಂತು ಎಂಬ ಬಗ್ಗೆ ದಾಖಲೆ ಪರಿಶೀಲಿಸುವಂತೆ ಪತ್ರ ಕಳುಹಿಸಿದ್ದೆ. ನನ್ನ ಪತ್ರಕ್ಕೆ ಪ್ರಧಾನಿ ಕಾರ್ಯಾಲಯ ಅಂದೇ ಸ್ಪಂದಿಸಿ ಕರೆ ಮಾಡಿ ಮಾಹಿತಿ ಪಡೆದಿತ್ತು. ಈಗ ರಾಜ್ಯದ ರೈತರ ಜಮೀನು ಹಾಗೂ ಮಠಗಳ ಪಹಣಿಯಲ್ಲಿಯೂ ವಕ್ಫ್ ಆಸ್ತಿ ಅಂತ ದಾಖಲಾಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. > ಕೃಷ್ಣಪ್ಪ ಬುದ್ದಿ ಸಾಮಾಜಿಕ ಕಾರ್ಯಕರ್ತ, ಉಪ್ಪಿನಬೆಟಗೇರಿ