ದಯಾ ಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ

murmu
Published on


ಸಕಲೇಶಪುರ : ಯಸಳೂರು ಹೋಬಳಿ ಗೌಡರಬೈಲು ಗ್ರಾಮದಲ್ಲಿ ಸರ್ಕಾರದಿಂದ ಬಗರ್ ಹುಕುಂ ಸಾಗುವಳಿಯಲ್ಲಿ ಮಂಜೂರಾದ ಜಾಗ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ರದ್ದಾದ ಹಿನ್ನೆಲೆಯಲ್ಲಿ ಕುಟುಂಬವೊಂದು ದಯಾಮರಣ ಕೋರಿ ಪತ್ರ ಬರೆದಿದೆ.


ಈ ಕುರಿತು ಸಂತ್ರಸ್ತ ಜರ್ನಾದನಚಾರಿ ಮಾತನಾಡಿ, ತಾಲೂಕಿನ ಯಸಳೂರು ಹೋಬಳಿ, ಗೌಡರಬೈಲು ಗ್ರಾಮದ ಸರ್ವೇ ನಂ.1 ರಲ್ಲಿ 1.02 ಎಕರೆ ಜಮೀನನ್ನು ಅಕ್ರಮ - ಸಕ್ರಮದಡಿ ಅನಧಿಕೃತ ಸಾಗುವಳಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ನಮಗೆ ಜಮೀನು ಮಂಜೂರು ಆಗಿತ್ತು. ಈ ಜಮೀನಿಗೆ ಸಂಬಂಧಿಸಿದಂತೆ ಸಂತೋಷ್ ಎಂಬುವರು ದೂರು ನೀಡಿದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳು ನಮ್ಮ ಜಮೀನಿನ ಮಂಜೂರಾತಿ ರದ್ದು ಮಾಡಿದ್ದಾರೆ.


ಆದರೆ ನಮಗೆ ಸಕಲೇಶಪುರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಓ.ಎಸ್.ನಂ.233/2017 ರಲ್ಲಿ ನ್ಯಾಯಾಲಯವು ಶಾಶ್ವತ ನಿರೋಧಾಜ್ಞೆ ಆದೇಶ ಮಾಡಿರುತ್ತದೆ ಹಾಗೂ ಈ ಕುರಿತು ಹೈಕೋರ್ಟ್ ಮತ್ತು ಹಾಸನ ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದ್ದು, ಈ ಅಪೀಲು ಘನ ನ್ಯಾಯಾಲಯದಲ್ಲಿ ಪೆಂಡಿಂಗ್ ಇರುತ್ತದೆ ಎಂದರು.


ಆದರೆ ಪಿಡಿಒ ಅವರು ನಾವು ಸಾಗುವಳಿ ಮಾಡಿಕೊಂಡು ಜಮೀನಿನಲ್ಲಿ ವಾಸವಿರುವ ಮನೆಯನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದ್ದಾರೆ. ನಮಗೆ ಗೌಡರಬೈಲು ಗ್ರಾಮದ ಸರ್ವೇ ನಂ.1 ರಲ್ಲಿ 1.02 ಎಕರೆ ಜಮೀನು ಹೊರತುಪಡಿಸಿ, ಬೇರೆ ಎಲ್ಲೂ ಸಹ ಜಮೀನು ಇಲ್ಲ. ನಾನು ಈ ಜಮೀನಿನಲ್ಲೇ ಮನೆ ಕಟ್ಟಿಕೊಂಡು ಕೂಲಿ ಕೆಲಸ ಮಾಡಿಕೊಂಡು ನನ್ನ ಇಬ್ಬರು ಗಂಡು ಮಕ್ಕಳೊಂದಿಗೆ ವಾಸವಾಗಿದ್ದೇನೆ. ಪ್ರಕರಣ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು ಸಹ ದಬ್ಬಾಳಿಕೆಯಿಂದ ನಮ್ಮ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿರುವುದರಿಂದ ಬೇಸತ್ತು ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಪತ್ರ ಬರೆದಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net