

ತುಮಕೂರು : ತುಮಕೂರು-ನೆಲಮಂಗಲದ ವರೆಗಿರುವ ಚತುಷ್ಪಥ ರಸ್ತೆಯನ್ನು 8 ಪಥದ ಹೆದ್ದಾರಿ ಜತೆಗೆ ಸರ್ವಿಸ್ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಲು ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ಹೇರುವಂತೆ ಸಂಸದ ಜಿ.ಎಸ್.ಬಸವರಾಜು ಅವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಸಂಸ್ಥೆ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್ ನೇತೃತ್ವದಲ್ಲಿ ಗುರುವಾರ ಮನವಿ ನೀಡಿದ್ದು ವಸಂತನರಸಾಪುರ ಕೈಗಾರಿಕಾ ವಸಾಹತು ದೇಶದಲ್ಲಿಯೇ ಅತಿದೊಡ್ಡದಾದ ಕೈಗಾರಿಕಾ ಪ್ರದೇಶವಾಗಿ ರೂಪುಗೊಳ್ಳುತ್ತಿದೆ, ಇದಕ್ಕೆ ಹೊಂದಿಕೊಂಡಂತೆ ರಾಷ್ಟೀಯ ಹೆದ್ದಾರಿ 48 ಜತೆಗೆ 206 ಸಹ ತುಮಕೂರಿನಲ್ಲಿ ಸಂಧಿಸುವುದರಿಂದ ತುಮಕೂರು-ನೆಲಮಂಗಲ ರಸ್ತೆಯನ್ನು ಅಷ್ಟಪಥವನ್ನಾಗಿ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಲಾಗಿದೆ.
ಚೆನೈ-ಬೆಂಗಳೂರು ಮುಂಬೈ ಇಂಡಸ್ಟ್ರೀಯಲ್ ಕಾರಿಡರ್ ಅಭಿವೃದ್ಧಿ ಪೂರಕವಾಗಿ ತುಮಕೂರು- ಚಿತ್ರದುರ್ಗ-ದಾವಣಗೆರೆ ರೈಲ್ವೆ ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳಲು ಕೇಂದ್ರ ಬಜೆಟ್‌ನಲ್ಲಿ ಅನುದಾನ ನೀಡಲು ಒತ್ತಡ ಹೇರುವಂತೆ ಮನವಿ ಮಾಡಿಕೊಳ್ಳಲಾಗಿದೆ. ಸಂಸ್ಥೆಯ ಮಾಜಿ ಅಧ್ಯಕ್ಷರಾದ ಸುಜ್ಞಾನ್ ಹಿರೇಮಠ್, ಟಿ.ಆರ್.ಲೋಕೇಶ್, ಸುರೇಂದ್ರ ಷಾ, ಸಾಗರನಹಳ್ಳಿ ಪ್ರಭು, ಎ.ಆರ್.ಶ್ರೀನಾಥ್ ಇದ್ದರು.