

ಮಂಡ್ಯ: ವಿಶೇಷತೆಗಳಿಂದ ಗಮನಸೆಳೆಯುತ್ತಿರುವ ತಾಲೂಕಿನ ಉಮ್ಮಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಬರೆದ ಅಭಿಮಾನದ ಪತ್ರ ಮೆಚ್ಚುಗೆಗೆ ಪಾತ್ರವಾಗಿದೆ. ಮಾತ್ರವಲ್ಲದೆ ಅಧಿಕಾರಿಗಳು ಕೂಡ ಪ್ರತಿಯಾಗಿ ಪತ್ರ ಕಳುಹಿಸುವ ಮೂಲಕ ಮಕ್ಕಳ ಸಂತಸವನ್ನು ಹೆಚ್ಚಿಸುವುದರ ಜತೆಗೆ ಪ್ರೋತ್ಸಾಹ ನೀಡಿದ್ದಾರೆ.
ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಯು.ಸ್ನೇಹಾ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, 8ನೇ ತರಗತಿಯ ಬಿ.ಕುಶಾಲ್‌ರಾಜ್ ಜಿಲ್ಲಾಧಿಕಾರಿ ಡಾ.ಕುಮಾರ, ಯು.ಎಸ್.ಜೀವಿತ್‌ಗೌಡ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಹಾಗೂ ಯು.ಕೆ.ಯಶ್ವಂತ್ ಮಂಡ್ಯ ತಾಲೂಕು ಪಂಚಾಯಿತಿ ಇಒ ವೀಣಾ ಅವರಿಗೆ ಪತ್ರ ಬರೆದಿದ್ದರು.
ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ನಾಡಿನ ಇತಿಹಾಸದ ವೈಭವ, ಸರ್ಕಾರಿ ಶಾಲೆ ಹಾಗೂ ಡಿಜಿಟಲ್ ಗ್ರಂಥಾಲಯದ ಸದ್ಬಳಕೆ, ಓದಿನ ಮಹತ್ವ, ದಿನಪತ್ರಿಕೆ ಓದುವ ಹವ್ಯಾಸ, ಪಾಲಕರಿಗೆ ಪತ್ರ ಬರೆಯುವುದು, ಕಂಪ್ಯೂಟರ್ ಬಳಕೆ ಸೇರಿದಂತೆ ಸೌಲಭ್ಯದಿಂದಾಗುತ್ತಿರುವ ಅನುಕೂಲದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದರು. ಮಾತ್ರವಲ್ಲದೆ ಯೂಟ್ಯೂಬ್‌ನಲ್ಲಿ ‘ಡಿಜಿಟಲ್ ಲೈಬ್ರರಿ ಉಮ್ಮಡಹಳ್ಳಿ’ ಎಂದು ಸರ್ಚ್ ಮಾಡಿ ನಮ್ಮ ಚಟುವಟಿಕೆ ವೀಕ್ಷಿಸುವಂತೆ ಪತ್ರದ ಮೂಲಕ ಮನವಿ ಮಾಡಿದ್ದರು. ಈ ಪತ್ರ ಅಧಿಕಾರಿಗಳ ಮೆಚ್ಚುಗೆ ಗಳಿಸಿದೆ.
ಇದಕ್ಕೆ ಪ್ರತಿಯಾಗಿ ಪತ್ರ ಬರೆದಿರುವ ಅಧಿಕಾರಿಗಳು, ಗ್ರಂಥಾಲಯ ಬಳಕೆ ಹಾಗೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಓದುವ ಹವ್ಯಾಸ ರೂಢಿಸಿಕೊಳ್ಳಲೆಂದು ‘ಅಮ್ಮನಿಗೊಂದು ಪುಸ್ತಕ, ಪುಸ್ತಕ ಗೂಡು’ ಹೀಗೆ ಹಲವು ಕಾರ್ಯಕ್ರಮವನ್ನು ಸರ್ಕಾರದಿಂದ ರೂಪಿಸಲಾಗಿದೆ. ಅದನ್ನು ನಿಮ್ಮ ಜತೆಗೆ ಸ್ನೇಹಿತರು ಬಳಕೆ ಮಾಡಿಕೊಳ್ಳಬೇಕು. ಶಿಕ್ಷಣದ ಕಡೆಗೆ ಗಮನಹರಿಸುವುದರ ಜತೆಗೆ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಇರುವ ಆಸಕ್ತಿ ಮುಂದುವರೆಯಲಿ. ಡಿಜಿಟಲ್ ಗ್ರಂಥಾಲಯವನ್ನು ಇನ್ನಷ್ಟು ಸದುಪಯೋಗಪಡಿಸಿಕೊಳ್ಳಿ. ಈ ಮೂಲಕ ಸಮಾಜದ ಉತ್ತಮ ಪ್ರಜೆಗಳಾಗಿ ಹಾಗೂ ಉನ್ನತ ಸ್ಥಾನವನ್ನು ಅಲಂಕರಿಸಿ ಎಂದು ಸಲಹೆ ನೀಡಿದ್ದಾರೆ.