ಅಧಿಕಾರ ದುರ್ಬಳಕೆ ಆರೋಪದಡಿ ನೋಟಿಸ್ ಜಾರಿ

Published on

ಕನಕಗಿರಿ: ತಾಲೂಕಿನ ಗೌರಿಪುರ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಳ್ಳಲಾಗಿದ್ದ ನಾಲಾ ಹೂಳೆತ್ತುವ ಕಾಮಗಾರಿಯಲ್ಲಿ ಅಕ್ರಮ ನಡೆದು, ಅಧಿಕಾರ ದುರ್ಬಳಕೆಯಾಗಿದ್ದು, ಉತ್ತರ ನೀಡುವಂತೆ ಮೂವರು ಅಧಿಕಾರಿಗಳಿಗೆ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

ತಾಪಂ ಸಹಾಯಕ ನಿರ್ದೇಶಕಿ (ಗ್ರಾ.ಉ) ಶರಪೂನ್ನಿಸಾ ಬೇಗಂ, ಪಿಡಿಒ ಅಮರೇಶ ರಾಠೋಡ್ ಹಾಗೂ ತಾಂತ್ರಿಕ ಸಂಯೋಜಕ ತನ್ವೀರ್‌ಗೆ ನೋಟಿಸ್ ನೀಡಲಾಗಿದೆ. ದೇವಲಾಪುರ ಹಾಗೂ ಚಿಕ್ಕವಡ್ರಕಲ್ ಗ್ರಾಮದ ನಾಲೆಗಳಲ್ಲಿ ಹೂಳೆತ್ತುವ ಕಾಮಗಾರಿಯ 19.5 ಲಕ್ಷ ರೂ. ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು ತಾಪಂಗೆ ದೂರು ಸಲ್ಲಿಸಿದ್ದರು.

ತಾಪಂ ಅಧಿಕಾರಿಗಳಿಂದ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಜಿಪಂ ಸಿಇಒಗೆ ದೂರು ಸಲ್ಲಿಸಿದ್ದರು. ಈ ಆಧಾರದ ಮೇಲೆ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ್ ಜ.31ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಾಮಗಾರಿ ನಡೆಯದಿರುವುದು ಬೆಳಕಿಗೆ ಬಂದಿತ್ತು. ಕಾಮಗಾರಿಯ ಜಿಪಿಎಸ್ ಛಾಯಾಚಿತ್ರಗಳಿಲ್ಲದೆ, ಒಬ್ಬರೇ ಎಲ್ಲ ಕೂಲಿಕಾರರ ಸಹಿಗಳು ಮಾಡಿರುವಂತೆ ಮೇಲ್ನೊಟಕ್ಕೆ ಕಂಡುಬಂದಿದ್ದು, ಕಾಮಗಾರಿಯ ಅಳತೆಯೂ ಅಂದಾಜು ಮಾಡಿ ದಾಖಲಿಸಲಾಗಿದೆ.

ಗೌರಿಪುರ ಗ್ರಾಪಂನ ನರೇಗಾ ಕಾಮಗಾರಿ ದುರ್ಬಳಕೆ ಕುರಿತು ಮೂವರು ಅಧಿಕಾರಿಗಳಿಗೆ ಶೋಕಾಸ್ ನೊಟೀಸ್ ನೀಡಲಾಗಿದ್ದು, ಉತ್ತರ ಕೇಳಲಾಗಿದೆ. ಉತ್ತರ ಬಂದ ಮೇಲೆ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

ಪ್ರಕಾಶ ವಡ್ಡರ್

ಜಿಪಂ ಯೋಜನಾ ನಿರ್ದೇಶಕ, ಕೊಪ್ಪಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net