

ಹುಬ್ಬಳ್ಳಿ: ಅಪರಿಚಿತ ಹಾಗೂ ಅನುಮಾನಾಸ್ಪದವಾಗಿರುವ ಪಾಕಿಸ್ತಾನ ಸೇರಿದಂತೆ ಬೇರೆ ಬೇರೆ ದೇಶದ ವ್ಯಕ್ತಿಗಳು ಹುಬ್ಬಳ್ಳಿ-ಧಾರವಾಡದ ಮಸೀದಿಗಳಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ. ಈ ಕುರಿತು ಪರಿಶೀಲಿಸುವಂತೆ ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಅವರು ಪೊಲೀಸ್ ಆಯುಕ್ತರಿಗೆ ಶನಿವಾರ ಪತ್ರ ಬರೆದಿದ್ದಾರೆ.
ಅವಳಿ ನಗರದ ಕೆಲ ಮಸೀದಿಗಳಲ್ಲಿ ಅಪರಿಚಿತರ ಓಡಾಟ ಹೆಚ್ಚಾಗುತ್ತಿದೆದೆ. ಅವರು ಸ್ಥಳೀಯರಲ್ಲ ಎಂಬ ಸಂಶಯವನ್ನು ಪತ್ರದಲ್ಲಿ ವ್ಯಕ್ತಪಡಿಸಿರುವ ಶಾಸಕ ಬೆಲ್ಲದ, ಹೀಗೆ ಓಡಾಡುತ್ತಿರುವವರಲ್ಲಿ ಹೊಸ ಮುಖ, ಅಪರಿಚಿತವಾಗಿದ್ದು ಅನುಮಾನಾಸ್ಪದ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ. ಅವರು ಹೊರ ದೇಶದ ಪ್ರಜೆಗಳಂತೆ ಭಾಸವಾಗುತ್ತಾರೆ. ಅವಳಿನಗರದ ವಿವಿಧ ಕೊಳಚೆ ಪ್ರದೇಶದಲ್ಲಿ (ಜನ್ನತ್ ನಗರ ಧಾರವಾಡ ಸೇರಿದಂತೆ) ವಾಸವಾಗಿದ್ದಾರೆಂಬ ಮಾಹಿತಿಯೂ ಇದೆ. ಈ ಕುರಿತು ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಅವಳಿ ನಗರದಲ್ಲಿರುವ ಅಪರಿಚಿತ, ಹೊಸಮುಖದ ವ್ಯಕ್ತಿಗಳನ್ನು ವಿಚಾರಿಸಿ ಸೂಕ್ತ ಕ್ರಮ ಜರುಗಿಸಬೇಕು. ಇದರಿಂದ ಮಹಾನಗರದಲ್ಲಿ ಅಹಿತಕರ ಘಟನೆಯಾಗದಂತೆ ತಡೆಯುವ ಕೆಲಸ ಮಾಡಬೇಕೆಂದು ಬೆಲ್ಲದ ಸೂಚಿಸಿದ್ದಾರೆ.