

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಶಾಸಕರಾದ ಅರವಿಂದ ಬೆಲ್ಲದ ಹಾಗೂ ಎಂ.ಆರ್. ಪಾಟೀಲ ಮನೆ ಎದುರು ಜು. 6ರಂದು ಪತ್ರ ಚಳವಳಿ ಸಂಘಟಿಸಲಾಗಿದೆ ಎಂದು ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ಹುಬ್ಬಳ್ಳಿ ಮಂಜುನಾಥ ನಗರ ಕ್ರಾಸ್ ಆನಂದನಗರ ರಸ್ತೆಯಲ್ಲಿರುವ ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಹಾಗೂ ಮಧ್ಯಾಹ್ನ 12 ಗಂಟೆಗೆ ಗೋಕುಲ ರಸ್ತೆ ಅಕ್ಷಯ ಪಾರ್ಕ್ನಲ್ಲಿರುವ ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ನಿವಾಸದ ಎದುರು ಪತ್ರ ಚಳವಳಿ ನಡೆಸಲಾಗುವುದು. ರಾಜ್ಯ ಸರ್ಕಾರದ ಮಳೆಗಾಲದ ಅಧಿವೇಶನದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಶಾಸಕರು ನಮ್ಮ ಮೀಸಲಾತಿ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಿ ಎಂಬ ಉದ್ದೇಶದಿಂದ ಈ ಹೋರಾಟ ರೂಪಿಸಿದ್ದೇವೆ ಎಂದರು.
ಧಾರವಾಡದ ಶಾಸಕ ವಿನಯ ಕುಲಕರ್ಣಿ ನಿವಾಸದ ಎದುರು ಜು. 3ರಂದು ಪತ್ರ ಚಳವಳಿ ನಡೆಸಲಾಗಿತ್ತು. 8ರಂದು ಬೆಳಗಾವಿ ಜಿಲ್ಲೆಯಲ್ಲಿ, 9ರಂದು ಬಾಗಲಕೋಟೆ, 10ರಂದು ಶಿವಮೊಗ್ಗ, ಗದಗ, 11ರಂದು ಕಲಬುರ್ಗಿ ಹಾಗೂ 12ರಂದು ವಿಜಯಪುರ ಜಿಲ್ಲೆಗಳಲ್ಲಿ ಪತ್ರ ಚಳವಳಿ ನಡೆಸಲಾಗುವುದು ಎಂದು ತಿಳಿಸಿದರು.
ಕಳೆದ 3 ವರ್ಷಗಳಿಂದ 2ಎ ಮೀಸಲಾತಿಗೆ ಹೋರಾಟ ನಡೆಸಿದ್ದೇವೆ. ಈ ಹಿಂದೆ ಹೋರಾಟ ನಡೆಸಿದಾಗ ಚುನಾವಣೆ ನಡೆದ ಬಳಿಕ ಕಾನೂನು ತಜ್ಞರ ಸಲಹೆ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಯಾವುದೇ ಪ್ರಯತ್ನ ಆಗಿಲ್ಲ. ಹಾಗಾಗಿ ಪುನಃ ಹೋರಾಟ ರೂಪಿಸಿದ್ದೇವೆ. 2ಎ ಮೀಸಲಾತಿಯಿಂದ ಸಮಾಜದ ಮಕ್ಕಳ ಶಿಕ್ಷಣಕ್ಕೆ ಹಾಗೂ ಉದ್ಯೋಗ ನೇಮಕಾತಿಯಲ್ಲಿ ಅನುಕೂಲವಾಗಲಿದೆ. ನಾವು ರಾಜಕೀಯ ಉದ್ದೇಶಕ್ಕಾಗಿ ಮೀಸಲಾತಿ ಕೇಳುತ್ತಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಶಿಶೇಖರ ಡಂಗನವರ, ಜಿ.ಜಿ. ದ್ಯಾವನಗೌಡ್ರ, ದೀಪಾ ಗೌರಿ, ಮೈಲಾರಿ ಧಾರವಾಡ, ಇತರರು ಇದ್ದರು.