ಮೀಸಲಾತಿಗೆ ಆಗ್ರಹಿಸಿ ಪತ್ರ ಚಳವಳಿ

3 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಂಚಮಸಾಲಿ, ಮಲೆಗೌಡ, ಗೌಡ ಲಿಂಗಾಯತ, ದೀಕ್ಷ ಲಿಂಗಾಯತರಿಗೆ ರಾಜ್ಯ ಸರ್ಕಾರದಲ್ಲಿ 2ಎ ಮೀಸಲಾತಿ ಹಾಗೂ ಎಲ್ಲ ಲಿಂಗಾಯತ ಒಳ ಪಂಗಡಗಳಿಗೆ ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ ಪತ್ರ ಚಳವಳಿ ನಡೆಸಲಾಯಿತು.
ನಗರದ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಿಂದ ಜಯನಗರ ಬಾರಾಕೋಟ್ರಿ ಬಳಿಯ ಶಾಸಕ ವಿನಯ ಕುಲಕರ್ಣಿ ಮನೆಗೆ ತೆರಳಿದ ಸಮಾಜದ ಮುಖಂಡರು, ಮೀಸಲಾತಿ ವಿಷಯವಾಗಿ ಈ ಬಾರಿಯ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿ ಶಾಸಕರ ಅನುಪಸ್ಥಿತಿಯಲ್ಲಿ ಅವರ ಪುತ್ರಿಗೆ ಮನವಿಪತ್ರ ಸಲ್ಲಿಸಿದರು.
ಬಿಜೆಪಿ ಸರ್ಕಾರ ಇದ್ದಾಗಲೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಹೋರಾಟ ನಡೆಸಲಾಗಿತ್ತು. ಆಗ ಭರವಸೆ ನೀಡಿದ್ದ ಸರ್ಕಾರ, ಒಂದೂವರೆ ವರ್ಷವಾದರೂ ಈಡೇರಿಸಲಿಲ್ಲ. ಹೀಗಾಗಿ ತಮಗೆ ಕೊಟ್ಟಿರುವ ಶಾಸನಬದ್ಧ ಅಧಿಕಾರ ಸದ್ಬಳಕೆ ಮಾಡಿಕೊಂಡು ನಮ್ಮ ಹಕ್ಕನ್ನು ಪ್ರತಿಪಾದಿಸುವಂತೆ ಒತ್ತಾಯಿಸಿದರು.
ಮನವಿ ಸ್ವೀಕಾರದ ಬಳಿಕ ವೀಡಿಯೋ ಕಾನ್ಫರೆನ್ಸ್​ ಮೂಲಕ ಸ್ವಾಮೀಜಿ ಜತೆಗೆ ಮಾತನಾಡಿದ ಶಾಸಕ ವಿನಯ, ಅಧಿವೇಶನದಲ್ಲಿ ಈ ವಿಷಯವಾಗಿ ಖಂಡಿತ ಚಚಿರ್ಸುತ್ತೇವೆ ಎಂದು ಭರವಸೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಮಳೆಗಾಲ ಅಧಿವೇಶನದಲ್ಲಿ ಸಮಾಜದ ಎಲ್ಲ ಶಾಸಕರು ಸದನದಲ್ಲಿ ಧ್ವನಿ ಎತ್ತಿ ಸರ್ಕಾರದ ಕಣ್ಣು ತೆರೆಸಬೇಕು. ಇದಕ್ಕಾಗಿ ಪತ್ರ ಚಳವಳಿ ಆರಂಭಿಸಿದ್ದೇವೆ. ಶಾಸಕ ವಿನಯ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡಿ ಪತ್ರ ನೀಡಿ ಸದನದಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದೇವೆ ಎಂದರು.
ಹಿಂದಿನ ಅಧಿವೇಶನದಲ್ಲಿ ಯಾವ ಶಾಸಕರೂ ಮಾತನಾಡಿಲ್ಲ. ಹೀಗಾಗಿ ಎಲ್ಲ ಪಂಚಮಸಾಲಿ ಶಾಸಕರ ನಿವಾಸಗಳಿಗೆ ಒಂದೊಂದು ದಿನ ಭೇಟಿ ನೀಡಿ ಪತ್ರ ಚಳವಳಿ ಮಾಡಲಿದ್ದೇವೆ. ಶಾಸಕರು ಭರವಸೆ ಕೊಡುವವರೆಗೆ ಮನೆ ಬಾಗಿಲಿಗೆ ಹೋಗಿ ಪತ್ರ ಕೊಡಲಿದ್ದೇವೆ. ವಿನಯ ಕುಲಕರ್ಣಿ 2ಎ ಹೋರಾಟದ ಮುಂಚೂಣಿ ನಾಯಕರು. ಗುರುವಾರ ಬೆಳಗಾವಿ, ಶುಕ್ರವಾರ ಹುಬ್ಬಳ್ಳಿಯಲ್ಲಿ ಚಳವಳಿ ಮಾಡಲಿದ್ದೇವೆ ಎಂದರು.
ಚುನಾವಣೆ ಬಳಿಕ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಆದರೆ ಇನ್ನೂ ಮಾಡಿಲ್ಲ. ನೀತಿ ಸಂಹಿತೆ ಮುಗಿದಿದ್ದರೂ ಸಭೆ ನಡೆಸಿಲ್ಲ. ಹೀಗಾಗಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ತೀವ್ರ ಸ್ವರೂಪದ ಹೋರಾಟ ನಿಶ್ಚಿತ ಎಂದು ಎಚ್ಚರಿಸಿದರು.
ನಿಂಗಪ್ಪ ಕೆಲಗೇರಿ, ಸುರೇಶ ಹೊಸಪೇಟೆ, ಶಿವನಗೌಡ ಪಾಟೀಲ, ನಿಂಗಣ್ಣ ಕರಿಕಟ್ಟಿ, ಪ್ರಕಾಶ ಭಾವಿಕಟ್ಟಿ, ರುದ್ರಗೌಡ ಪಾಟೀಲ, ಮೈಲಾರ ಧಾರವಾಡ, ಮುತ್ತು ಬೆಳ್ಳಕ್ಕಿ, ಶಾಂತಾ ಇಳಕಲ್ಲ, ಗೌರಮ್ಮ ನಾಡಗೌಡ್ರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net