ಬರಪೀಡಿತ ತಾಲೂಕುಗಳೆಂದು ಘೋಷಿಸಿ

PJ NEW
Published on

ಹುಬ್ಬಳ್ಳಿ : ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಶಿಗ್ಗಾಂವಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೊಷಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.

ಈ ಕುರಿತು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಸಚಿವ ಪ್ರಲ್ಹಾದ ಜೋಶಿ ಪತ್ರ ಬರೆದಿದ್ದಾರೆ.

ಈ ಪ್ರದೇಶಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗದ ಸಂಕಷ್ಟ ಹೇಳ ತೀರದಾಗಿದೆ. ಮಳೆ ನಂಬಿ ಈಗಾಗಲೇ ಬಿತ್ತನೆ ಮಾಡಿದ್ದ ಬೆಳೆ ನಾಶವಾಗಿದ್ದು, ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಬರಗಾಲ ಪೀಡಿತ ತಾಲೂಕು ಎಂದು ಘೊಷಿಸಲು ಎಲ್ಲ ಮಾನದಂಡವನ್ನು ಈ ತಾಲೂಕುಗಳು ಹೊಂದಿದ್ದರೂ, ಸರ್ಕಾರ ಬರಪೀಡಿತ ಪ್ರದೇಶವೆಂದು ಘೊಷಿಸದಿರುವುದು ತಾಲೂಕಿನ ರೈತರ ಆಕ್ರೊಶಕ್ಕೆ ಕಾರಣವಾಗಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಶೇ. 65ರಷ್ಟು ಮಳೆ ಕೊರತೆಯಾಗಿದೆ. ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಈ ಮುಂಗಾರಿನಲ್ಲಿ 425 ಮಿಮಿ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 368 ಮಿಮಿ ಮಳೆಯಾಗಿದ್ದು, ಶೇ. 13ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ಒಂದೊಂದು ತಾಲೂಕಿನಲ್ಲಿಯೂ ಮಳೆ ಹಾಗೂ ಬೆಳೆ ಹಾನಿ ಪ್ರಮಾಣ ವ್ಯತ್ಯಾಸವಾಗಿದೆ ಎಂದು ತಿಳಿಸಿದ್ದಾರೆ.

ಬರ ಘೊಷಣೆಯಾಗದ ತಾಲೂಕುಗಳಾದ ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಶಿಗ್ಗಾಂವಿ ತಾಲೂಕುಗಳು ತೀವ್ರ ಬರದಿಂದ ಈ ಭಾಗದ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ವರ್ಷ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿದೆ. ಈ ತಾಲೂಕುಗಳಲ್ಲಿ ಸಮರ್ಪಕ ಬಿತ್ತನೆ ಕಾರ್ಯ ಆಗಿಲ್ಲ. ವಿದ್ಯುತ್ ಸರಬರಾಜಾಗದೆ ನೀರಿಲ್ಲದೆ ಫಸಲು ಬರುವ ಸಾಧ್ಯತೆಯೂ ಕಡಿಮೆ ಇದೆ. ರೈತರು ಸಾಲ-ಸೋಲ ಮಾಡಿ ಬೀಜ ಗೊಬ್ಬರವನ್ನು ಭೂಮಿಗೆ ಹಾಕಿ ಮುಂಗಾರು ಮಳೆ ಬಾರದೆ ಇರುವ ಕಾರಣ ಮೊಳಕೆಯೊಡೆದ ಬೀಜ ಬೆಳೆಯದೆ ಭೂಮಿಯಲ್ಲೇ ಕಮರಿಹೋಗಿದೆ. ಹಾಗಾಗಿ ರೈತನ ಬದುಕು ಚಿಂತಾಜನಕವಾಗಿದೆ. ಮಾಡಿದ ಸಾಲ ತೀರಿಸದೆ ರೈತ ರೋಸಿ ಹೋಗಿದ್ದಾನೆ.

ತಾಲೂಕಿನಲ್ಲಿ ಇರುವ ಕೆರೆಗಳಲ್ಲಿ ಅಲ್ಪ ಪ್ರಮಾಣದ ನೀರು ಇದೆ. ಸಕಾಲದಲ್ಲಿ ಮಳೆಯಾಗದ ಕಾರಣ ಶೇ. 90ರಷ್ಟು ಕೆರೆಗಳು ಬತ್ತಿಹೋಗಿವೆ. ಅಂತರ್​ಜಲ ಕಡಿಮೆಯಾಗಿ ಶೇ. 80ರಷ್ಟು ರೈತರ ಕೊಳವೆ ಬಾವಿ ಸಂಪೂರ್ಣ ಬತ್ತಿಹೋಗಿವೆ. ಕೆರೆಕಟ್ಟೆಗಳಲ್ಲಿ ನೀರಿಲ್ಲದ ಪರಿಣಾಮ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ತೊಂದರೆಯಾಗಿದೆ. ಆದ್ದರಿಂದ ಕೂಡಲೇ ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿನ ಈ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೊಷಣೆ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net