ಕಸ್ತೂರಿ ರಂಗನ್ ವರದಿ ವಿರೋಧಿಸಿ ಪತ್ರ ಅಭಿಯಾನ

24 ckm 1 vijaykumar
ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯಕುಮಾರ್ ಮಾತನಾಡಿದರು.
Published on

ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿಯ ನ್ಯೂನ್ಯತೆಗಳ ಕುರಿತು ಆಕ್ಷೇಪಣೆ ಸಲ್ಲಿಸಲು ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಗುರುವಾರದಿಂದ ಜಿಲ್ಲೆಯಾದ್ಯಂತ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯಕುಮಾರ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯಲ್ಲಿನ ನ್ಯೂನತೆಗಳ ಕುರಿತು ಮನೆ ಮನೆಗಳಿಗೆ ತೆರಳಿ ಕರಪತ್ರಗಳನ್ನು ವಿತರಿಸಲಾಗುವುದು. ಜತೆಗೆ ಈ ವರದಿಯಲ್ಲಿ ನ್ಯೂನ್ಯತೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು ಎಂAದು ಕೆಲವು ಶಾಸಕರು, ಸಂಸದರು ಅಭಿಪ್ರಾಯ ಮಂಡಿಸಿದ್ದಾರೆ. ಅದೇ ರೀತಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಎಚ್.ಡಿ. ತಮ್ಮಯ್ಯ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ತಿಳಿಸಬೇಕು. ಜಿಲ್ಲೆಯ ಜೆಡಿಎಸ್ ಮುಖಂಡರು ನಿಯೋಗ ಮೂಲಕ ಕೇಂದ್ರದ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಕಸ್ತೂರಿ ರಂಗನ್ ವರದಿಯ ಬಾಧಕದ ಬಗ್ಗೆ ತಿಳಿಸಿ ಅವರ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು.
ಈ ವರದಿಗೆ ಆಕ್ಷೇಪಣೆ ಸಲ್ಲಿಸಲು ಸೆ. ೩೦ ಕೊನೆಯ ದಿನ. ಕಸ್ತೂರಿ ರಂಗನ್ ವರದಿಯಿಂದಾಗಿ ಸಮಸ್ಯೆ ಆಗಲಿರುವ ಗ್ರಾಮಸ್ಥರು ಸೇರಿದಂತೆ ಸಂಘ ಸಂಸ್ಥೆಯವರು ಆಕ್ಷೇಪಣೆ ಸಲ್ಲಿಸಬೇಕು. ಜಿಲ್ಲೆಯ ಹಲವು ನಗರ ಪ್ರದೇಶಗಳಿಗೆ ಈ ವರದಿಯಿಂದಾಗಿ ತುಂಬಾ ತೊಂದರೆಯಾಗಲಿದೆ. ಅದ್ದರಿಂದ ಸ್ಥಳೀಯ ಸಂಸ್ಥೆಗಳು ಕೂಡಲೇ ನಿರ್ಣಯ ಕೈಗೊಂಡು ಆಕ್ಷೇಪಣೆ ಸಲ್ಲಿಸುವ ಕೆಲಸ ಮಾಡಬೇಕು. ಈ ಕೆಲಸ ಜರೂರಾಗಿ ಆಗಬೇಕಾಗಿದೆ. ಹಾಗಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ (ಕೆಜಿಎಫ್) ಅಧ್ಯಕ್ಷ ಡಾ. ಎಚ್.ಟಿ. ಮೋಹನ್‌ಕುಮಾರ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಸಿದ್ಧಪಡಿಸುವ ಸಂದರ್ಭದಲ್ಲಿ ಉಪಗ್ರಹ ಆಧಾರಿತ ನಕ್ಷೆಯನ್ನು ತಯಾರಿಸಲಾಗಿದೆ. ಮಲೆನಾಡಿನ ಜನ ಜೀವನ, ಸಂಸ್ಕೃತಿಯ ಹಲವಾರು ಗ್ರಾಮ, ನಗರ, ಜನ ವಸತಿ ಪ್ರದೇಶಗಳು ಹಾಗೂ ರೈತರ ಭೂಮಿ, ಗೋಮಾಳ, ಹುಲ್ಲುಬನಿ ಸೇರಿದಂತೆ ಕಂದಾಯ ಭೂಮಿಗಳು ಈ ವ್ಯಾಪ್ತಿಯಲ್ಲಿ ತಂದು ಅವೈಜ್ಞಾನಿಕ ನಕ್ಷೆ ತಯಾರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವರದಿ ಗೋವಾ ಪೌಂಡೇಷನ್ ಎಂಬ ಎನ್‌ಜಿಓನ ಕೊಡಗೆಯಾಗಿದೆ. ಸರ್ಕಾರದ ಮೇಲೆ ಒತ್ತಡ ಹೇರಿ ವರದಿ ಜಾರಿಗೊಳಿಸಲು ವಿದೇಶಗಳು ಸೇರಿದಂತೆ ಹಲವು ಎನ್‌ಜಿಓಗಳು ಒತ್ತಡ ಹೇರಿ ಆರನೇ ಬಾರಿ ಅಧಿಸೂಚನೆ ಹೊರಡಿಸಲಾಗಿದೆ. ಈ ಹಿಂದೆ ಹೊರಡಿಸಲಾದ ಅಧಿಸೂಚನೆಯನ್ನು ತಡೆ ಹಿಡಿಯುವಂತೆ ಹೋರಾಟ ನಡೆಸಲಾಗಿತ್ತು ಎಂದು ಹೇಳಿದರು.
ವರದಿಯ ನ್ಯೂನ್ಯತೆಯನ್ನು ಸರಿಪಡಿಸಲು ಕೇಂದ್ರ ಸರ್ಕಾರ ಸಂಜಯ್ ಕುಮಾರ್ ನೇತೃತ್ವದ ಸಮಿತಿ ರಚಿಸಿತ್ತು. ಆದರೆ ಎರಡು ವರ್ಷಗಳಾದರೂ ಈ ಸಮಿತಿ ಸ್ಥಳಕ್ಕೆ ಬಂದು ನಮ್ಮ ಸಮಸ್ಯೆಗಳನ್ನು ಆಲಿಸುವಲ್ಲಿ ವಿಫಲವಾಗಿದೆ. ಇದೀಗ ಮತ್ತೊಮ್ಮೆ ಅಧಿಸೂಚನೆ ಯಥಾವತ್ತಾಗಿ ಹೊರಡಿಸಲಾಗಿದೆ ಎಂದು ದೂರಿದರು.
ಕಸ್ತೂರಿ ರಂಗನ್ ವರದಿಯ ಜಾರಿಗೆ ನಮ್ಮ ವಿರೋಧ ಇಲ್ಲ. ಆದರೆ, ಜನವಸತಿ ಪ್ರದೇಶ, ಕಾಫಿ ಬೆಳೆಗಾರರು ಸೇರಿದಂತೆ ಎಲ್ಲ ರೀತಿಯ ರೈತರಿಗೆ ತೊಂದರೆಯಾಗದAತೆ ಕೆಲವು ಮಾರ್ಪಾಡು ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಜಿಎಫ್ ಮಾಜಿ ಅಧ್ಯಕ್ಷ ಜಯರಾಂ, ಮುಖಂಡರಾದ ವಸಂತೇಗೌಡ, ಲಿಂಗಪ್ಪಗೌಡ, ದೇವರಾಜ್, ಶಂಕರ್, ಯತೀಶ್, ಮಲ್ಲೇಶ್, ಕೆ.ಕೆ. ರಘು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net