ಪುತ್ತೂರು: ೩೪ ನೆಕ್ಕಿಲಾಡಿ ಗ್ರಾಮದ ಜಮೀನೊಂದಕ್ಕೆ ಏಕ ನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆಯ ಮಂಜೂರಾತಿ ಆದೇಶದಲ್ಲಿ ಸಹಿ ಪೋರ್ಜರಿ ಮತ್ತು ಕಚೇರಿ ಲೆಟರ್ ಹೆಡ್, ಮೊಹರು ನಕಲಿ ಮಾಡಿರುವ ಪ್ರಕರಣದ ಹಿಂದಿರುವ ಜಾಲವನ್ನು ಪತ್ತೆ ಹಚ್ಚಲು ಪೊಲೀಸರಿಗೆ ದೂರು ನೀಡುವಂತೆ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿ ಪುಡಾ ಸದಸ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಪೋರ್ಜರಿ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದಾಗ ಪುತ್ತೂರು ನಗರ ಯೋಜನಾ ಪ್ರಾಧಿಕಾರ ಕಚೇರಿಯಿಂದ ತಾಂತ್ರಿಕ ಅನುಮೋದನೆ ನೀಡುವ ಪರ್ಮಿಟ್‌ನಂತಿರದೇ ವ್ಯತಿರಿಕ್ತವಾದ ರೀತಿಯಲ್ಲಿ ಏಕ ವಿನ್ಯಾಸ ನಕ್ಷೆಯ ತಾಂತ್ರಿಕ ಅನುಮೋದನೆ ಪತ್ರವಿದೆ. ಈ ಪತ್ರದಲ್ಲಿ ಕರ್ನಾಟಕ ಸರ್ಕಾರದ ಲಾಂಛನ ಮುದ್ರಿಸಲಾಗಿದೆ. ನಕ್ಷೆಯಲ್ಲಿ ಸದಸ್ಯ ಕಾರ್ಯದರ್ಶಿಗಳ ಮೊಹರುಗಳನ್ನು ನಕಲಿ ಮಾಡಲಾಗಿದೆ. ಪೋರ್ಜರಿ ಪ್ರಕರಣದಲ್ಲಿ ಈ ಎಲ್ಲ ಗಂಭೀರ ಅಂಶಗಳು ಇರುವುದರಿಂದ ಇದನ್ನು ತನಿಖೆ ನಡೆಸಿ ಇದರ ಹಿಂದಿರುವ ಜಾಲವನ್ನು ಪತ್ತೆ ಹಚ್ಚಬೇಕಿದೆ. ಜಾಲದಲ್ಲಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಈ ಜಾಲವನ್ನು ಬಗ್ಗು ಬಡಿಯಲು ಪೊಲೀಸ್ ಠಾಣೆಗೆ ದೂರು ನೀಡುವುದು ಅಗತ್ಯ ಎಂದು ಆಗ್ರಹಿಸಿದ್ದಾರೆ.