ದೇಸಿ ಕ್ರೀಡೆಗಳನ್ನು ಬೆಳೆಸುವ ಕೆಲಸವಾಗಲಿ

Oplus_131072
ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಕಾಂಗ್ರೆಸ್ ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿದರು.
Published on

ಯಳಂದೂರು: ಭಾರತದ ಅಪ್ಪಟ ದೇಸಿ ಕ್ರೀಡೆಗಳಾದ ಖೋಖೋ, ಕಬಡ್ಡಿ ಸೇರಿದಂತೆ ಇತರ ಕ್ರೀಡೆಗಳು ಪ್ರಸ್ತುತ ಅಂತಾರಾಷ್ಟ್ರೀಯ ಕ್ರೀಡೆಗಳಾಗಿ ಮಾರ್ಪಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಇಂತಹ ಇನ್ನಷ್ಟು ಕ್ರೀಡೆಗಳನ್ನು ಬೆಳೆಸುವ ಕೆಲಸವಾಗಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ ಹೇಳಿದರು.

ಇತ್ತೀಚೆಗೆ ಕೆಸ್ತೂರು ಯೂತ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ತಾಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಆಹ್ವಾನಿತ ಕಬಡ್ಡಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಗ್ರಾಮೀಣರಲ್ಲಿ ಅನೇಕ ಯುವ ಪ್ರತಿಭೆಗಳಿದ್ದು, ತಮ್ಮ ಪ್ರತಿಭೆಯನ್ನು ಧಾರೆ ಎರೆದಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಬಹುದು. ಇಂತಹ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದ್ದು, ನಗರ ಪ್ರದೇಶದಲ್ಲಿರುವ ಕ್ರೀಡಾ ಕ್ಲಬ್‌ಗಳು ಇವರಿಗೆ ಉಚಿತ ತರಬೇತಿ ನೀಡುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಕೆಸ್ತೂರು ತಂಡಕ್ಕೆ ಪ್ರಥಮ ಬಹುಮಾನ: ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ 16 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಕೆಸ್ತೂರು ತಂಡವು ಪ್ರಥಮ ಸ್ಥಾನ ಪಡೆದುಕೊಂಡಿತು. ಶಿವಪುರ ತಂಡ ದ್ವಿತೀಯ ಸ್ಥಾನ ಪಡೆಯಿತು. ಗೆದ್ದ ತಂಡಗಳಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ವಿತರಿಸಲಾಯಿತು.

ಗ್ರಾಮದ ಡಿ.ಎನ್.ನಾಗರಾಜು, ಪಂದ್ಯಾವಳಿ ಆಯೋಜಕ, ಕೋಚ್ ಮಾದೇಶ್, ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನಸ್ವಾಮಿ, ರಾಜು, ಸಿದ್ದಶೆಟ್ಟಿ, ಸಿದ್ದಪ್ಪಸ್ವಾಮಿ, ಮಹೇಶ್, ರಂಗಸ್ವಾಮಿ, ಶಿಕ್ಷಕ ಕುಮಾರ್, ರೇಣು, ರಂಗರಾಜು, ಚಂದ್ರಶೇಖರ್, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net