

ಬನ್ನೂರು: ಫುಡ್ ಆ್ಯಂಡ್ ಫನ್ ಫೆಸ್ಟ್ ಕಾರ್ಯಕ್ರಮ ಮಕ್ಕಳಿಗೆ ಶುಚಿತ್ವದ ಮಹತ್ವ, ಆಹಾರದ ಗುಣಮಟ್ಟ, ಗ್ರಾಹಕ ಹಕ್ಕುಗಳ ರಕ್ಷಣೆ ಬಗ್ಗೆ ಪೂರಕವಾದ ಮಾಹಿತಿ ಒದಗಿಸಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ತಿಳಿಸಿದರು.
ಪಟ್ಟಣ ಸಮೀಪದ ಸೋಸಲೆ ಗ್ರಾಮದಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಿದ್ದ ಫುಡ್ ಆ್ಯಂಡ್ ಫನ್ ಫೆಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ ನೀಡಿದರೆ ಸಾಲದು. ಬದಲಾಗಿ ಅದರೊಂದಿಗೆ ಇಂತಹ ಮೌಲ್ಯಯುತ ವಿಚಾರವನ್ನೂ ತಿಳಿಸಿಕೊಡುವ ಮೂಲಕ ಅವರನ್ನು ಪರಿಪೂರ್ಣ ವಿದ್ಯಾರ್ಥಿಗಳನ್ನಾಗಿ ಮಾಡಬೇಕು ಎಂದು ತಿಳಿಸಿದರು.
ನಂತರ ವಿವಿಧ ಮನರಂಜನಾತ್ಮಕ ಆಟಗಳು ನಡೆದವು. ಮಕ್ಕಳು ಮಾಡಿದ ತಿಂಡಿ-ತಿನಿಸುಗಳನ್ನು ಪಾಲಕರು ಸವಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪುಟ್ಟಸ್ವಾಮಿ, ಮುಖ್ಯ ಶಿಕ್ಷಕ ಎಂ.ಪಿ.ಮಂಜಣ್ಣ, ಕಾಂತರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.