ದೇಸಿ ಗೋ ತಳಿ ಸಂರಕ್ಷಿಸುವ ಕಾರ್ಯವಾಗಲಿ

10 srs 1
Published on

ಶಿರಸಿ: ಎಲ್ಲಿಯವರೆಗೆ ಗೋ ಸಂಪತ್ತು ಇರುತ್ತದೆಯೋ ಅಲ್ಲಿಯವರೆಗೂ ಕೃಷಿ ಸೊಂಪಾಗಿರುತ್ತದೆ. ನಮ್ಮಲ್ಲಿರುವ ಅಮೂಲ್ಯ, ಅಪ್ಪಟ ದೇಸಿ ತಳಿಯ ಗೋವುಗಳನ್ನು ಕಾಪಾಡುವ, ಸಂರಕ್ಷಿಸುವ ಕಾರ್ಯವಾಗಬೇಕಿದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಕೃಷಿ ಜಯಂತಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ದೇಶಿ ಆಕಳುಗಳ ಸಂಖ್ಯೆ ಇಂದು ಕಡಿಮೆಯಾಗಿದೆ. ಆರೋಗ್ಯಯುತ ಬೆಳೆಗೆ ರಾಸಾಯನಿಕ ಗೊಬ್ಬರ ಬದಲು ಸಾವಯವ ಗೊಬ್ಬರ ಹಾಕಬೇಕು. ರಾಸಾಯನಿಕ ಜಾಸ್ತಿ ಬಳಕೆಯಿಂದ ಭೂಮಿ ಬರಡಾಗುತ್ತದೆ. ರಾಯಚೂರು, ಬಳ್ಳಾರಿ ಜಿಲ್ಲೆಗಳು ಇದಕ್ಕೊಂದು ನಿದರ್ಶನವಾಗಿದೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ನಾವು ಸಾಂಪ್ರದಾಯಿಕ ಕೃಷಿ ಮರೆತಿದ್ದೇವೆ. ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದ ಹಿಂದಿನ ಕಾಲದಲ್ಲಿ ರೈತರ ಬದುಕಿನಲ್ಲಿ ಸಮೃದ್ಧತೆ ಇರುತ್ತಿತ್ತು. ಆದಾಯ ಜಾಸ್ತಿ ಬರುತ್ತದೆ ಎಂಬ ಕಾರಣಕ್ಕೆ ಆಧುನಿಕ ಕೃಷಿ ಮಾಡಿದರೂ ಇಂದು ಸಾಲ ಇಲ್ಲದ ರೈತರನ್ನೂ ಕಾಣುತ್ತಿಲ್ಲ. ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದ ವೇಳೆ ಇಲ್ಲದ ರೋಗಗಳು ಈಗ ಜಾಸ್ತಿ ಆಗುತ್ತಿವೆ. ಸಾಂಪ್ರದಾಯಿಕ ಕೃಷಿ ಪದ್ಧತಿ ಶ್ರೇಷ್ಟ. ಆದಾಯ ಕಡಿಮೆ ಇದ್ದರೂ ಖರ್ಚೂ ಕಡಿಮೆ. ರೈತ ಸಾಲಗಾರನಾಗುವುದಿಲ್ಲ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಯುದ್ಧದ ಸಮಯದಲ್ಲಿ ಯೋಧರಿದ್ದರೆ ರೈತರಿರುತ್ತಾರೆ. ಉಳಿದ ಸಮಯದಲ್ಲಿ ಆಹಾರ ಒದಗಿಸುವ ಮೂಲಕ ರೈತರೂ ಯೋಧರಿಗೆ ಶಕ್ತಿ ತುಂಬುತ್ತಾರೆ. ಭಗವಂತನ ಭಕ್ತಿ ಮೂಲಕ ಜ್ಞಾನ ಯೋಗದ ಮಟ್ಟಕ್ಕೆ ನಾವು ಏರಬೇಕು. ದೇವರಲ್ಲಿ ವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದರು.

ಇತ್ತೀಚಿನ ವರ್ಷಗಳಲ್ಲಿ ಕೃಷಿ ಕ್ಷೇತ್ರವನ್ನು ಹಲವು ಸಮಸ್ಯೆಗಳು ಬಾಧಿಸುತ್ತಿವೆ. ಇದರಿಂದಾಗಿ ರೈತನ ವಿಶ್ವಾಸ ಕುಸಿಯುತ್ತಿದೆ. ಕೃಷಿ ಸಮಸ್ಯೆಗಳ ಜೊತೆಗೆ ರೈತ ಕುಟುಂಬಗಳ ಕೃಷಿ ಬಗೆಗಿನ ಅನಾದರವೂ ಸಮಸ್ಯೆ ತಂದೊಡ್ಡಿದೆ. ಮಲೆನಾಡಿನಲ್ಲಿ ಅಡಕೆ ಪ್ರಧಾನ ಬೆಳೆಯಾಗಿದ್ದು, ಅಡಕೆಗೆ ದರ ಕುಸಿದಿಲ್ಲ, ಆದರೆ, ಬೆಳೆ ಪ್ರಮಾಣ ಕುಸಿಯುತ್ತಿವೆ. ಅಡಕೆ ಬೆಳೆಗೆ ಆವರಿಸಿರುವ ಎಲೆಚುಕ್ಕಿ ರೋಗ ರೈತರನ್ನು ಕಂಗಾಲು ಮಾಡಿರುವ ಜೊತೆ ರೈತರಿಗೂ ತಮ್ಮ ಮಕ್ಕಳು ಇಂಜಿನಿಯರ್, ವೈದ್ಯರಾಗಲಿ ಎಂಬ ಆಶಯವನ್ನೇ ಜಾಸ್ತಿ ತೋರುತ್ತಿದ್ದಾರೆ. ತೋಟಿಗರೇ ಅವರ ಮಕ್ಕಳನ್ನು ಬೇರೆ ಕ್ಷೇತ್ರಕ್ಕೆ ಕಳಿಸುತ್ತಿದ್ದಾರೆ. ಈ ರೀತಿಯ ಅನಾದರವೇ ಕೃಷಿ ಕ್ಷೇತ್ರ ಕುಸಿಯಲು ಕಾರಣವಾಗುತ್ತಿದೆ. ಎಲೆಚುಕ್ಕಿ ರೋಗಕ್ಕೆ ಮೂಲ ಕಾರಣ ಮಣ್ಣಿನ ಆರೋಗ್ಯ ಸರಿ ಇಲ್ಲದಿರುವುದು ಎಂಬುದು ಈಗಾಗಲೇ ಪತ್ತೆಯಾಗಿದೆ. ಎಲೆಚುಕ್ಕಿಗೆ ಪೂರ್ಣ ಪ್ರಮಾಣದ ಔಷಧ ಎಲ್ಲೂ ಕಂಡು ಬರುತ್ತಿಲ್ಲ. ಈಗಲೇ ಎಚ್ಚೆತ್ತುಕೊಂಡು ಮಣ್ಣಿನ ಆರೋಗ್ಯ ಜಾಸ್ತಿಗೊಳಿಸುವ ಮೂಲಕ ಪಾರಾಗುವ ಯತ್ನ ನಡೆಸಬೇಕು ಎಂದರು.

ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ತೀರ್ಥಹಳ್ಳಿ, ನಗರ ಭಾಗದಲ್ಲಿ ಅಡಕೆ ಬೆಳೆಗೆ ಎಲೆಚುಕ್ಕಿ ರೋಗ ತೀವ್ರವಾಗಿ ಬಾಧಿಸಿದೆ. ಹಲವು ಅಡಕೆ ತೋಟಗಳಲ್ಲಿ ಫಸಲೇ ಇಲ್ಲದ ಸ್ಥಿತಿ ನಿರ್ವಣವಾಗಿದೆ. ಅಡಕೆಗೆ ಯಾವ ಯಾವ ರಸಾಯನಿಕ ಮಿಶ್ರಣ ಮಾಡುತ್ತಾರೆ. ಅಡಕೆ ಎಲ್ಲೆಲ್ಲಿಗೆ ಮಾರಾಟಕ್ಕೆ ಹೋಗುತ್ತದೆ ಎಂಬುದನ್ನು ನಾವು ಗಮನಿಸಿಕೊಳ್ಳದಿದ್ದರೆ ಮುಂದೆ ಇನ್ನಷ್ಟು ಕಷ್ಟದ ದಿನಗಳು ಬರಲಿವೆ. ಕೃಷಿಕನ ಮಕ್ಕಳಿಗೆ ಈಗ ಹೆಣ್ಣು ಕೊಡುವವರಿಲ್ಲ. ಕೃಷಿ ಕಾರ್ಯಗಳಿಗೆ ಕೆಲಸಗಾರರೇ ಸಿಗುತ್ತಿಲ್ಲ. ಇಂದು ಶ್ರಮ ಜೀವನ ಯಾರಿಗೂ ಬೇಡ ಎಂಬಂತಾಗಿದೆ. ಇಸ್ತ್ರಿ ಹಾಳಾಗದಂತೆ ದುಡಿಯಬೇಕು ಎಂಬ ಮಾನಸಿಕತೆ ಜಾಸ್ತಿ ಆಗುತ್ತಿದ್ದುದರ ಫಲವೇ ಹಳ್ಳಿಗಳು ವೃದ್ಧಾಶ್ರಮ ಆಗುತ್ತಿವೆ. ಕೃಷಿಯ ತೊಡಕು ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಇದುವರೆಗೆ ಆಗಿಲ್ಲ ಎಂದರು.

ಕೃಷಿಕನಿಗೆ ತನ್ನ ಉತ್ಪಾದನೆಯನ್ನು ಎಲ್ಲಿ ಬೇಕೆಂದರೆ ಮಾರುವ ಸ್ವಾತಂತ್ರ್ಯ ಬೇಕು. ಆದರೆ, ರಾಜ್ಯ ಸರ್ಕಾರ ಎಪಿಎಂಸಿಯಲ್ಲಿ ಮಾತ್ರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂದು ಸೂಚಿಸುತ್ತಿರುವುದು ಸರಿಯಾದ ಮಾರ್ಗವಲ್ಲ. ಎಲೆ ಚುಕ್ಕಿ ನಿವಾರಣೆಗೆ ಹೆಚ್ಚಿನ ಯತ್ನ ನಡೆಸಬೇಕಾದ ಅಗತ್ಯತೆ ಇದೆ ಎಂದರು.

ಹೈಕೋರ್ಟ್ ನ್ಯಾಯಾಧೀಶ ಚಂದ್ರಶೇಖರ ಜೋಶಿ, ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ, ಮಠದ ಉಪಾಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ಇತರರಿದ್ದರು.

ನನ್ನ ಜೀವನಕ್ಕೆ ಎಷ್ಟು ಬೇಕು ಎಂಬುದನ್ನು ಪರಿಸರದಿಂದ ಪಡೆದರೆ ಸಮಸ್ಯೆ ಆಗುವುದಿಲ್ಲ. ಆದರೆ, ಪರಿಸರವನ್ನು ಲಾಭಕ್ಕೆ ಬಳಸಲು ಹೊರಟಿದ್ದರಿಂದ ಸಮಸ್ಯೆ ಆಗಿದೆ. ಮಲೆನಾಡಿನಲ್ಲಿ ಸೊಪ್ಪಿನ ಬೆಟ್ಟ ನೀಡಿರುವುದು ಕೃಷಿ ಕಾರ್ಯಕ್ಕಾಗಿಯಾದರೂ, ಬೆಟ್ಟದಲ್ಲಿ ಪ್ಲಾಂಟೇಷನ್ ಮಾಡುವವರೂ ಜಾಸ್ತಿ ಆಗುತ್ತಿದ್ದಾರೆ. ತೋಟದ ಜೊತೆ ಬೆಟ್ಟವನ್ನೂ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಹಳ್ಳಿಗಳಲ್ಲಿ ಯುವಕರನ್ನು ಗುರುತಿಸದ ಕಾರಣ ಅವರು ಮಹಾನಗರಗಳತ್ತ ಸಾಗುತ್ತಿದ್ದಾರೆ. ಮಕ್ಕಳು ಹೊರಗಡೆ ಹೋದ ಬಳಿಕ ಇಲ್ಲಿಯ ಕೃಷಿ ಹೇಗೆ ಎಂಬ ಬಗ್ಗೆ ಚಿಂತನೆಯ ಅಗತ್ಯತೆ ಇದೆ. | ಚಂದ್ರಶೇಖರ ಜೋಶಿ, ಹೈಕೋರ್ಟ್ ನ್ಯಾಯಾಧೀಶರು ಹಿಂದುಸ್ತಾನದಲ್ಲಿರುವ ಮುಸ್ಲಿಮರು, ಕ್ರಿಶ್ಚಿಯನ್ನರು ಹೊರಗಿನವರಲ್ಲ. ಅವರೆಲ್ಲರೂ ಮೂಲ ಇಲ್ಲಿಯವರೇ. ಅವರ ಧರ್ಮ ಹೊರಗಿನಿಂದ ಬಂದಿದ್ದು. ಅವರು ಎಂದಿದ್ದರೂ ಭಾರತೀಯರು. | ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಸ್ವರ್ಣವಲ್ಲಿ ಸಂಸ್ಥಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net