

ಪಿರಿಯಾಪಟ್ಟಣ; ನಾಗರಿಕತ್ವ ಕುರಿತು ತಿಳಿವಳಿಕೆ ಹಾಗೂ ಸಮಾನತೆ ಕುರಿತು ಮಕ್ಕಳಿಗೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ನಾವು ಪ್ರತಿಷ್ಠಾನದ ಸ್ಥಾಪಕ ಗೌತಮ್ ಕಿರಗಂದೂರು ತಿಳಿಸಿದರು.
ತಾಲೂಕಿನ ಅಬ್ಬಳತಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ನಾವು ಪ್ರತಿಷ್ಠಾನ ಸಂಸ್ಥೆ ಸಹಯೋಗದಲ್ಲಿ ಮಕ್ಕಳ ಸಂವಿಧಾನ ಕ್ಲಬ್ ಕುರಿತಂತೆ ಕೊಡಗು ಮತ್ತು ಮೈಸೂರು ಜಿಲ್ಲೆಯ ವಸತಿ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರ ನಡೆಸಲಾಗುತ್ತಿದೆ. ಇದರ ಭಾಗವಾಗಿ ಪಿರಿಯಾಪಟ್ಟಣ ತಾಲೂಕಿನ ವಸತಿ ಶಾಲೆಗಳಿಗೆ ಭೇಟಿ ನೀಡಿ ತರಗತಿಗಳ ಪರಿವೀಕ್ಷಣೆ ಮಾಡಲಾಗುತ್ತಿದೆ ಎಂದರು.
ಸಂವಿಧಾನದಡಿ ಎಲ್ಲ ಹುದ್ದೆಗಳು ಸಮಾನವಾಗಿದ್ದು ಪ್ರತಿ ಕೆಲಸ ತನ್ನದೇ ಆದ ಪ್ರಾಮುಖ್ಯ ಹೊಂದಿದೆ. ಎಲ್ಲವನ್ನೂ ಸಮಾನದಿಂದ ಕಾಣುವ ಹಾಗೂ ಎಲ್ಲರಿಗೂ ಸಮಾನ ಗೌರವ ನೀಡುವುದರ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಲಾಗುತ್ತಿದೆ ಎಂದರು.
ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಜಿ.ಎಂ.ಪ್ರತಿಮಾ ಮಕ್ಕಳಿಗೆ ಅನುಭೂತಿ ಮತ್ತು ಸಮಾನತೆ ಕುರಿತು ಚಟುವಟಿಕೆಗಳ ಮೂಲಕ ತರಗತಿ ನಡೆಸಿದರು. ಮಕ್ಕಳು ಎಲ್ಲ ಹುದ್ದೆಗಳನ್ನು ಸಮಾನ ಪ್ರಾಮುಖ್ಯದಿಂದ ಕಾಣುವ ಮತ್ತು ಎಲ್ಲರನ್ನೂ ಸಮಾನವಾಗಿ ಒಪ್ಪಿಕೊಳ್ಳುವ ಮತ್ತು ಮತ್ತೊಬ್ಬರ ಕೆಲಸವನ್ನು ಗೌರವಿಸುವ ಮನೋಭಾವ ಮೂಡಿಸುವಲ್ಲಿ ಈ ತರಗತಿ ಮುಖ್ಯವಾಗಿವೆ ಎಂದರು.
ನಾವು ಪ್ರತಿಷ್ಠಾನದ ಕಾರ್ಯ ನಿರ್ವಾಹಕಿ ಮತ್ತು ಸಿ.ಆರ್.ಟಿ ಸಂಸ್ಥೆಯ ಫೆಲೋ ಸುಮನ್ ಮ್ಯಾಥ್ಯೂ ಮಕ್ಕಳೊಂದಿಗೆ ಸಂವಾದ ನಡೆಸಿದರು. ಎಲ್ಲ ಕೆಲಸವೂ ಒಂದೇ ಹಾಗೂ ಎಲ್ಲರಿಗೂ ಸಮಾನ ಗೌರವ ಎಂಬುದನ್ನು ತಿಳಿಸಲು ವಸತಿಶಾಲೆಯ ಸ್ವಚ್ಛತಾ ಕೆಲಸಗಾರರಾದ ಸುಜಾತಾ, ಅಡುಗೆಯವರಾದ ರೂಪಾ, ಕಾವಲುಗಾರರಾದ ಸಣ್ಣಮ್ಮ ಅವರನ್ನು ಮಕ್ಕಳು ಗೌರವಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮ ಸಂಯೋಜಕಿ ಬಿ.ಕೆ.ಕುಮಾರಿ, ವಸತಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.