

ಕೂಡ್ಲಿಗಿ: ದೇವರ ದಾಸಿಮಯ್ಯ ನೇಯ್ಗೆ ವೃತ್ತಿ ಜತೆಗೆ ಸಾಮಾಜಿಕ ಅನುಭವಗಳ ಸಾರವನ್ನು ವಚನಗಳಲ್ಲಿ ಬರೆದು ನಾಡನ್ನು ಬೆಳಗಿದ ಮಹಾ ಕಾಯಕ ಯೋಗಿಯಾಗಿದ್ದಾರೆ ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ನೇಕಾರ ಸಮಾಜದಿಂದ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 10ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ವಚನಕಾರ ದೇವರ ದಾಸಿಮಯ್ಯ. 167ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಆದರೆ, ಇದು ಹೆಚ್ಚು ಪ್ರಚಾರವಾಗದೆ ಜನಮನ ತಲುಪಿಲ್ಲ ಎಂದರು.
ನಾವು ವರ್ತಮಾನಕ್ಕೆ ಸೀಮಿತವಾಗದೆ ಇತಿಹಾಸ ತಿಳಿದು ಸಾಧಕರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ದಾಸಿಮಯ್ಯ ಅವರ ವಚನಗಳಲ್ಲಿ ಜೀವನದ ಮೌಲ್ಯಗಳನ್ನು ಕಾಣಬಹುದು. ನೇಕಾರ ಸಮುದಾಯದಿಂದ ದೇವರ ದಾಸಿಮಯ್ಯ ಅವರ ವಚನಗಳನ್ನು ಜನಮನಕ್ಕೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದರು.
ನೇಕಾರ ಒಕ್ಕೂಟದ ತಾಲೂಕು ಅಧ್ಯಕ್ಷ ಟಿ.ಎನ್.ಬಸಣ್ಣ, ಪಟ್ಟಸಾಲಿ ಸಮಾಜದ ತಾಲೂಕು ಅಧ್ಯಕ್ಷ ವಿಶ್ವನಾಥ, ಪ್ರಮುಖರಾದ ಯು.ರಾಜಣ್ಣ, ಎನ್.ಎಂ.ಸುನೀಲ್, ಎಸ್.ಕೆ.ನಾಗೇಶ್, ಮಧುಸೂದನ್, ಎನ್.ಆರ್.ವಿಜಯಕುಮಾರ್, ಎನ್.ಎಸ್.ನಾಗೇಶ್, ನಾಗರಾಜ ಹೊರಮಠ, ಸೊಕ್ಕೆ ನಾಗೇಶ್, ಯು.ಮಂಜುನಾಥ, ಕೊಟ್ರೇಶ್, ಮಂಜಣ್ಣ ಇತರರಿದ್ದರು.