

ಅಥಣಿ ಗ್ರಾಮೀಣ: ದಸರಾ ಉತ್ಸವ ಹಾಗೂ ಲಕ್ಷ್ಮಿದೇವಿ ಜಾತ್ರೆ ಅಂಗವಾಗಿ ವಿವಿಧ ಕಲಾವಿದರನ್ನು ಕರೆಸಿ ಕಲೆ ಮತ್ತು ಜಾನಪದ ಕಾರ್ಯಕ್ರಮ ಆಯೋಜಿಸುವ ಮೂಲಕ ಗ್ರಾಮೀಣ ಸೊಗಡು ಉಳಿಸಿ ಬೆಳೆಸುವುದು ಉತ್ತಮ ಬೆಳವಣಿಗೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ನಾಗನೂರ ಪಿ.ಕೆ. ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವ ಹಾಗೂ ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಜಾನಪದ ಕಲೆ ಉಳಿಸುವ ಮೂಲಕ ಹೆಚ್ಚು ಪಸರಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ. ಶಾಸಕನಾಗಿದ್ದಾಗ ಕೇವಲ ಒಂದು ಸಕ್ಕರೆ ಕಾರ್ಖಾನೆಯಿತ್ತು. ಈಗ ಕ್ಷೇತ್ರದಲ್ಲಿ ೪ ಕಾರ್ಖಾನೆಯಾಗಿದ್ದರಿಂದ ರೈತರು ೧.೭೦ ಲಕ್ಷ ಟನ್ ಕಬ್ಬು ಬೆಳೆಯುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ ೨,೫೦೦ ಕೋಟಿ ರೂ. ಹಣ ತಂದು ರಸ್ತೆ, ಶಾಲಾ ಕೊಠಡಿ, ಸಮುದಾಯ ಭವನ ಅಭಿವೃದ್ಧಿಪಡಿಸಿ ಸಂಪೂರ್ಣ ನೀರಾವರಿ ಮಾಡಲಾಗಿದೆೆ. ಪಶುವೈದ್ಯಕೀಯ ಹಾಗೂ ಕೃಷಿ ಮಹಾವಿದ್ಯಾಲಯಗಳು ಕ್ಷೇತ್ರದ ಮುಕುಟಮಣಿಯಾಗಿವೆ ಎಂದರು.
ವಕೀಲ ಅಮೋಘ ಖೋಬ್ರಿ ಮಾತನಾಡಿದರು. ಶಂಕರಯ್ಯ ಮಠಪತಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಮಹಾದೇವ ಬಿಳಿಕುರಿ, ಶಿವು ಗುಡ್ಡಾಪುರ, ಕಾಶಿನಾಥ ಸವದಿ, ಗ್ರಾಪಂ ಅಧ್ಯಕ್ಷ ಶ್ರೀಕಾಂತ ದರೂರ, ಚಿದಾನಂದ ಸವದಿ, ಶ್ರೀಕಾಂತ ಪೂಜಾರಿ, ಗಂಗಪ್ಪ ಬಿಳ್ಳೂರ, ನೇಮಿನಾಥ ಯಕ್ಷಂಬಿ, ಬಾಬು ಲಡಗಿ, ಈಶ್ವರ ಸವದಿ, ರಾಮಗೌಡ ಪಾಟೀಲ ಇತರರಿದ್ದರು.