ಮತ್ತೊಮ್ಮೆ ಮೋದಿ ಗೆಲ್ಲಿಸಲು ಶ್ರಮಿಸೋಣ

10 KMT 1
Published on

ಕುಮಟಾ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಉಚಿತ ಗ್ಯಾರಂಟಿಗಳಿಂದ ಅಧಿಕಾರಕ್ಕೆ ಬಂದಿದೆಯೇ ಹೊರತು ಜನಪರ ಯೋಜನೆ, ಅಭಿವೃದ್ಧಿಯ ಕಾರಣಕ್ಕಲ್ಲ. ನಾವು ಎಂದಿದ್ದರೂ ಅಭಿವೃದ್ಧಿಗೆ ಪ್ರಥಮ ಆದ್ಯತೆ ಕೊಟ್ಟು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಿ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಪಟ್ಟಣದ ನಾದಶ್ರೀ ಕಲಾ ಕೇಂದ್ರದಲ್ಲಿ ಬಿಜೆಪಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರವಾಸಿ ಕಾರ್ಯಕರ್ತರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಮಾಡಿದ ಅಭಿವೃದ್ಧಿಯನ್ನು ಜನರು ಮರೆಯದಂತೆ ನೋಡಿಕೊಳ್ಳಬೇಕು. ಹಿಂದಿನ ಎರಡು ಅವಧಿಗಳಲ್ಲಿ ಮೋದಿ ಸರ್ಕಾರ ಮಾಡಿದ ಅಸಂಖ್ಯ ಜನಪರ- ಅಭಿವೃದ್ಧಿ ಪರ ಕಾರ್ಯಗಳನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು. ಪ್ರತಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ, ಪ್ರಚಾರ, ಜನಜಾಗೃತಿಯ ಕೆಲಸ ಆಗಬೇಕಿದೆ. ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಸಂಘಟಿತ ಹೋರಾಟ, ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಪ್ರಾಮಾಣಿಕ ಪರಿಶ್ರಮದ ಮೂಲಕ ಮತ್ತೊಮ್ಮೆ ಗೆಲ್ಲಬೇಕಿದೆ ಎಂದರು.

ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಅವರು ದೇಶದ ಪ್ರಧಾನಿಯಾಗುವುದರಲ್ಲಿ ಸಂದೇಹವಿಲ್ಲ. ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜನರಿಗೆ ತಲುಪಿಸಿದೆ ಎಂದರು.

ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ್, ವಿವಿಧ ಪದಾಧಿಕಾರಿಗಳಾದ ರಾಜು ಭಂಡಾರಿ, ಗಣೇಶ ರಾವ್, ಎನ್.ಎಸ್. ಹೆಗಡೆ, ಗೋವಿಂದ ನಾಯ್ಕ, ಉಷಾ ಹೆಗಡೆ, ಸುಬ್ರಾಯ ದೇವಾಡಿಗ ಇತರರು ಇದ್ದರು. ಚಂದ್ರು ಎಸಳೆ ಸ್ವಾಗತಿಸಿದರು. ಗುರುಪ್ರಸಾದ ಹೆಗಡೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net